ಚಿಕ್ಕಮಗಳೂರು : ಮೂರು ದಿನಗಳ ಕಾಲ ನಡೆದ ಯಕ್ಷಗಾನ ಸಂಕ್ರಾತಿ ಕಾರ್ಯಕ್ರಮ…

157
firstsuddi

ಚಿಕ್ಕಮಗಳೂರು : ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯದ ಪ್ರಾಯೋಜಕತ್ವ ದಲ್ಲಿ ನಗರದ ವಿರಕ್ತಮಠ ಬಸವ ಮಂದಿರದಲ್ಲಿ ಮೂರು ದಿನಗಳ ಕಾಲ ನಡೆದ ಯಕ್ಷಗಾನ ಸಂಕ್ರಾತಿ ಕಾರ್ಯಕ್ರಮ ನೋಡುಗರ ಮನಗೆದ್ದಿತು.

ಶಿವಮೊಗ್ಗದ ನಾಟ್ಯಶ್ರೀ ಕಲಾತಂಡದ ಕಲಾವಿದರಿಂದ ದತ್ತಮೂರ್ತಿ ಭಟ್ ಅವರ ನಿರ್ದೇಶನದಲ್ಲಿ ನಡೆದ ಕರಾವಳಿಯ ಗಂಡು ಕಲೆ ಯಕ್ಷಗಾನ ಪ್ರದರ್ಶನ ಸಾರ್ವಜನಿಕರನ್ನು ಮೂರು ಗಂಟೆಗೂ ಅಧಿಕ ಕಾಲ ಹಿಡಿದಿಡುವಲ್ಲಿ ಯಶಸ್ವಿಯಾಯಿತು.

ಮೊದಲ ದಿನ ಅಕ್ಕಮಹಾದೇವಿ ಚರಿತ್ರೆ, ಎರಡನೇ ದಿನ ಶ್ರೀ ದೇವಿದಾಸ ವಿರಚಿತ ದಕ್ಷಯಜ್ಞ ಹಾಗೂ ಮೂರನೇ ದಿನ ಹೊಸ್ತೋಟ ಮಂಜುನಾಥ ಭಾಗವತ ವಿರಚಿತ ಬಸವೇಶ್ವರ ಚರಿತ್ರೆ ಪ್ರಸಂಗದಲ್ಲಿ ಕಲಾವಿದರ ಅದ್ಬುತ ಅಭಿನಯ, ಚುರುಕು ಸಂಭಾಷಣೆ, ನವಿರು ಹಾಸ್ಯ, ಕಂಚಿನ ಕಂಠದ ಭಾಗವತಿಕೆ ಸಭಿಕರನ್ನು ತಲೆದೂಗುವಂತೆ ಮಾಡಿದವು.

ಯಕ್ಷಗಾನವೆಂದರೇ ಬರೀ ಪೌರಾಣಿಕ ಪ್ರಸಂಗಳಿಗಷ್ಟೇ ಸೀಮಿತವಾಗಿರುವುದು ಸಾಮಾನ್ಯ ಸಂಗತಿ ಆದರೆ ಅದರಿಂದ ಹೊರಬಂದು ನಾಟಕಗಳಲ್ಲಷ್ಟೇ ಪ್ರದರ್ಶಿಸುತ್ತಿದ್ದ ಅಕ್ಕಮಹಾದೇವಿ ಚರಿತ್ರೆ ಹಾಗೂ ಬಸವೇಶ್ವರ ಚರಿತ್ರೆ ಪ್ರಸಂಗವನ್ನು ಯಕ್ಷಗಾನದಲ್ಲಿ ಅಳವಡಿಸಿ ಪ್ರದರ್ಶಿಸಿದ್ದು ಭಕ್ತರ ಮೆಚ್ಚುಗೆಗೆ ಪಾತ್ರವಾಯಿತು.

ವಿರಕ್ತಮಠ ಬಸವಮಂದಿರದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಮೂರೂ ದಿನಗಳ ಕಾಲ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಅಕ್ಕ ಮಹಾದೇವಿ ಚರಿತ್ರೆ ಪ್ರಸಂಗವನ್ನು ಕರಡಿಗವಿ ಮಠದ ಶ್ರೀ ಶಿವಶಂಕರ ಶಿವಯೋಗಿ ಸ್ವಾಮೀಜಿ, ದಕ್ಷಯಜ್ಞ ಪ್ರದರ್ಶನವನ್ನು ಯಳನಾಡು ಮಠದ ಶ್ರೀ ಜ್ಞಾನಪ್ರಭು ಸಿದ್ಧರಾಮ ದೇಶಿಕೇಂದ್ರ ಸ್ವಾಮೀಜಿ ಹಾಗೂ ಬಸವೇಶ್ವರ ಚರಿತ್ರೆ ಯಕ್ಷಗಾನವನ್ನು ಗವಿಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಮತ್ತು ಸಪ್ಪೇಸ್ವಾಮಿ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು.

ಭಾಗವತರಾಗಿ ಕೊಳಗಿ ಕೇಶವ ಹೆಗಡೆ, ನಿಟ್ಟೂರು ಲಂಬೋಧರ ಹೆಗಡೆ, ಪಾತ್ರಧಾರಿಗಳಾಗಿ ಸಿದ್ಧಾಪುರದ ಅಶೋಕ ಭಟ್, ಕಲ್ಲಗದ್ದೆಯ ವಿನಾಯಕ ಹೆಗಡೆ, ಪ್ರಭಾಕರ ಹೆಗಡೆ, ಇಟಗಿ ಮಹಾಬಲೇಶ್ವರ ಭಟ್, ಮರೂರು ಸುಬ್ರಮಣ್ಯ ಹೆಗಡೆ, ಬಂಗಾರಮಕ್ಕಿಯ ರಾಮಚಂದ್ರಭಟ್, ಚಪ್ಪರಮನೆ ಶ್ರೀಧರ ಹೆಗಡೆ, ಮೂರೂರು ನಾಗೇಂದ್ರ ಭಟ್, ಶಿರಗುಣಿ ಲಕ್ಷ್ಮೀನಾರಾಯಣ ಹೆಗಡೆ, ಯಲ್ಲಾಪುರದ ಸದಾಶಿವ ಭಟ್, ಪ್ರಣವ ಭಟ್, ಬಗರಿಮಕ್ಕಿ ವೆಂಕಟೇಶ್ ಹೆಗಡೆ, ಮಹಾಬಲೇಶ್ವರ ಗೌಡ, ಹುಚ್ಚಪ್ಪಗೌಡ, ನವ್ಯ ಡಿ.ಭಟ್ ಪ್ರೇಕ್ಷಕರ ಪ್ರಶಂಸೆಗೆ ಪಾತ್ರರಾದರು.