ಚಿಕ್ಕಮಗಳೂರು: ರಾಷ್ಟ್ರದ ಭವಿಷ್ಯವನ್ನು ಉಜ್ವಲಗೊಳಿಸುವ ಶಕ್ತಿ ಶಿಕ್ಷಕ ಸಮುದಾಯಕ್ಕೆ ಮಾತ್ರವಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಹೇಳಿದರು.
ಜಿಲ್ಲಾ ಎಸ್.ಸಿ/ಎಸ್.ಟಿ ಪ್ರಾಥಮಿಕ, ಮಾಧ್ಯಮಿಕ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ದಿ ಸಂಘ ನಗರದ ಶಿಕ್ಷಕರ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಜಿಲ್ಲಾ ಸಮಾವೇಶ ಹಾಗೂ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕರು ಈ ದೇಶದ ಆಧಾರ ಸ್ತಂಭಗಳು, ಅವರು ಅರ್ಪಣಾ ಮನೋಭಾವದಿಂದ ಕಾರ್ಯ ನಿರ್ವಹಿಸಿ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮತ್ತು ಉತ್ತಮ ನಾಗರೀಕರನ್ನಾಗಿ ರೂಪಿಸಿದರೆ ಮಾತ್ರ ರಾಷ್ಟ್ರದ ಸರ್ವತೋಮುಖ ಅಭಿವೃದ್ದಿಯಾಗುತ್ತದೆ ಎಂದರು.
ಇದೇ ವೇಳೆ ಶಿಕ್ಷಕರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ನೀಡಿದ ಮನವಿಗೆ ಪ್ರತಿಕ್ರಿಯಿಸಿದ ಅವರು ತಾವು ಸದಾಕಾಲ ಶಿಕ್ಷಕರ ಪರವಾಗಿರುವುದರ ಜೊತೆಗೆ ಅವರ ಎಲ್ಲಾ ಸಮಸ್ಯೆಗಳಿಗೂ ಸ್ಪಂದಿಸುವುದಾಗಿ ಭರವಸೆ ನೀಡಿದರು.
ಸಂಘದ ರಾಜ್ಯಾಧ್ಯಕ್ಷ ಡಾ|| ವಿ.ಟಿ.ವೆಂಕಟೇಶಯ್ಯ ಮಾತನಾಡಿ ರಾಜ್ಯದಲ್ಲಿ ಎಸ್.ಸಿ/ಎಸ್.ಟಿ ಸಮುದಾಯದ ಶಿಕ್ಷಕರು 44 ಸಾವಿರವಿದ್ದು, ಅವರ ಎಲ್ಲಾ ಸಮಸ್ಯೆಗಳ ನಿವಾರಣೆಗೆ ಸಂಘದಿಂದ ಅವಿತರ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಸೇವೆಯಿಂದ ನಿವೃತ್ತರಾದ ಶಿಕ್ಷಕರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು, ಬಡ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.
ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಎಜುಕೇಷನ್ ಹೆಲ್ಫ್ ಲೈನ್ ಆಂದೋಲನದ ಜಿಲ್ಲಾ ಸಂಚಾಲಕರನ್ನಾಗಿ ಹೆಚ್.ಪಿ.ಪ್ರಭುಪ್ರಸಾದ್ ಅವರನ್ನು ನೇಮಕ ಮಾಡಲಾಯಿತು.
ಸಂಘದ ಜಿಲ್ಲಾಧ್ಯಕ್ಷ ಎಲ್.ಟಿ.ಅಜ್ಜಯ್ಯ ಅಧ್ಯಕ್ಷತೆ ವಹಿಸಿದ್ದರು, ಉಪಾಧ್ಯಕ್ಷ ಎಲ್.ಟಿ.ಚಂದ್ರಯ್ಯ, ಮೂಡಲಗಿರಿಯಪ್ಪ, ಜಿ.ಪಂ. ಸದಸ್ಯರಾದ ಜೆಸಿಂತಾ ಅನಿಲ್‍ಕುಮಾರ್, ಬೆಳವಾಡಿ ರವೀಂದ್ರ, ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ, ಜಿಲ್ಲಾ ಖಜಾಂಚಿ ಪಿ.ಪಾಲಯ್ಯ, ಅಣ್ಣಾನಾಯಕ್, ವಿಜಯಲಕ್ಷ್ಮೀ, ಪುಟ್ಟಸ್ವಾಮಿ, ಸೋಮಶೇಖರ್, ವನಜಾಕ್ಷಿ, ಗುರುಸ್ವಾಮಿ, ಶಾಂತಮೂರ್ತಿ, ಜೋಗಪ್ಪ ಉಪಸ್ಥಿತರಿದ್ದರು.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು: ರಾಷ್ಟ್ರದ ಭವಿಷ್ಯವನ್ನು ಉಜ್ವಲಗೊಳಿಸುವ ಶಕ್ತಿ ಶಿಕ್ಷಕ ಸಮುದಾಯಕ್ಕೆ ಮಾತ್ರವಿದೆ: ಎಸ್.ಎಲ್.ಭೋಜೇಗೌಡ










