ಚಿಕ್ಕಮಗಳೂರು : ವಾಚ್ ಮ್ಯಾನ್ ಆಗದೇ ಇರುವವರು ಆಸ್ತಿ ಬರೆದುಕೊಡುತ್ತಾರಾ ಎಂದು ಶಾಸಕ ಜಮೀರ್ ಅಹಮ್ಮದ್ ಅವರ ವಿರುದ್ಧ ಪ್ರವಾಸೋಧ್ಯಮ ಸಚಿವ ಸಿ.ಟಿ. ರವಿ ಅವರು ವ್ಯಂಗ್ಯವಾಡಿದ್ದಾರೆ. ಸ್ಯಾಂಡಲ್‍ವುಡ್ ಡ್ರಗ್ಸ್ ನಂಟು ಪ್ರಕರಣದಲ್ಲಿ ಶಾಸಕ ಜಮೀರ್ ಅಹಮ್ಮದ್ ಅವರ ಹೆಸರು ಕೇಳಿ ಬಂದಿದ್ದು, ಈ ಪ್ರಕರಣದಲ್ಲಿ ನನ್ನ ಹೆಸರು ಸಾಭೀತಾದರೆ ನನ್ನ ಸಂಪೂರ್ಣ ಆಸ್ತಿಯನ್ನು ಸರ್ಕಾರಕ್ಕೆ ಬರೆದು ಕೊಡುವುದಾಗಿ ಶಾಸಕ ಜಮೀರ್ ಅಹಮ್ಮದ್ ಹೇಳಿಕೆ ನೀಡಿದ್ದರು. ಅಲ್ಲದೇ ಈ ಹಿಂದೆಯೂ ಕೂಡಾ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆದರೆ ನಾನು ಅವರ ಮನೆ ಮುಂದೆ ವಾಚ್ ಮ್ಯಾನ್ ಆಗುತ್ತೇನೆ ಎಂದು ಹೇಳಿದ್ದರು. ಈ ಕುರಿತಂತೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮೀರ್ ಅಹಮ್ಮದ್ ಅವರ ಆಸ್ತಿ ಅಕ್ರಮವಾಗಿದ್ದರೆ ಸರ್ಕಾರವೇ ಮುಟ್ಟುಗೋಲು ಹಾಕಿಕೊಳ್ಳುತ್ತದೆ. ಅವರ ರಾಜಕೀಯ ಹೇಳಿಕೆಗಳನ್ನು ಜನರು ಗಂಭೀರವಾಗಿ ತೆಗೆದುಕೊಂಡಿಲ್ಲ. ವಾಚ್ ಮ್ಯಾನ್ ಆಗದೆ ಇರುವವರು ಆಸ್ತಿ ಬರೆದುಕೊಡುತ್ತಾರ. ಮೊದಲು ಅವರ ಮಾತಿಗೆ ತಕ್ಕ ಹಾಗೆ ನಡೆದುಕೊಳ್ಳುವುದಾದರೆ ಮೊದಲು ಹೇಳಿದ ರೀತಿಯಲ್ಲಿ ನಡೆದುಕೊಳ್ಳಲಿ ಎಂದರು.
ಡ್ರಗ್ ಮಾಫಿಯಾ ಕುರಿತು ತನಿಖೆ ಗಂಭೀರವಾಗಿ ನಡೆಯುತ್ತಿದೆ. ಈ ಹಿಂದೆ ಡ್ರಗ್ ಮಾಫಿಯಾ ವಿರುದ್ಧ ಎಂದೂ ಇಷ್ಟು ಗಂಭೀರವಾಗಿ ತನಿಖೆ ನಡೆದಿಲ್ಲ. ಇದೇ ಮೊದಲು. ಡ್ರಗ್ ಮಾಫಿಯಾವನ್ನು ಬೇರು ಸಮೇತ ಕಿತ್ತು ಹಾಕಲು ಗಂಭೀರವಾಗಿ ತನಿಖೆ ನಡೆಸಲಾಗುತ್ತಿದೆ ಎಂದರು.










