ಚಿಕ್ಕಮಗಳೂರು : ವಿದ್ಯಾರ್ಥಿಗಳು ಮತ್ತು ಯುವಜನತೆ ಮಾದಕ ವಸ್ತುಗಳಿಂದ ಸದಾ ದೂರವಿರಬೇಕು ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಜಿಲ್ಲಾ ಸಂಚಾಲಕಿ ಬಿ.ಕೆ.ಭಾಗ್ಯ ಸಲಹೆ ಮಾಡಿದರು.
ನಗರದ ಶಕ್ತಿ ಮದ್ಯವಸನ ಮುಕ್ತಿ ಕೇಂದ್ರದಲ್ಲಿ ನಿನ್ನೆ ನಡೆದ ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿದೆಸೆಯಲ್ಲಿ ಮತ್ತು ಯೌವ್ವನಾವಸ್ಥೆಯಲ್ಲಿ ಬಹಳಷ್ಟು ಆಕರ್ಷಣೆಗಳಿರುತ್ತವೆ. ಅವುಗಳಿಗೆ ಬಲಿಯಾದರೆ ನಮ್ಮ ಬದುಕು ಪತನವಾಗುತ್ತದೆ. ತಂಬಾಕು ಸೇವನೆ, ಮದ್ಯಸೇವನೆ, ಮಾದಕ ವಸ್ತುಗಳ ಚಟ ನಮ್ಮನ್ನು ಹಾಳು ಮಾಡುವುದರ ಜೊತೆಗೆ ನಮ್ಮ ಕುಟುಂಬವನ್ನೂ ಬೀದಿಗೆ ತರುತ್ತದೆ. ಮನೆತನದ ಮರ್ಯಾದೆ, ಗೌರವ ಬೀದಿಪಾಲಾಗುತ್ತವೆ ಎಂದು ಎಚ್ಚರಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಕ್ತಿ ಮದ್ಯವ್ಯಸನ ಮುಕ್ತಿ ಕೇಂದ್ರದ ವ್ಯವಸ್ಥಾಪಕ ಹೆಚ್.ಮಂಜುನಾಥ್, ಮಾದಕ ವಸ್ತುಗಳ ಸೇವನೆ ಆರಂಭದಲ್ಲಿ ನಮಗೆ ಸುಖದ ಭ್ರಮೆ ತಂದರೂ ನಂತರದಲ್ಲಿ ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕೆಡಿಸುತ್ತದೆ, ನಮ್ಮನ್ನು ಸಮಾಜದಲ್ಲಿ ಒಬ್ಬಂಟಿಯನ್ನಾಗಿ ಮಾಡುತ್ತದೆ ಎಂದು ಹೇಳಿದರು.
ಮಾದಕ ವಸ್ತುಗಳ ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು. ಹೆಚ್.ಆರ್.ಸೌರಭ, ಎಂ.ಹೆಚ್.ಲಂಕೇಶ್ ಉಪಸ್ಥಿತರಿದ್ದರು.










