ಚಿಕ್ಕಮಗಳೂರು : ಸರ್ಕಾರಿ ಮತ್ತು ಖಾಸಗೀ ಶಾಲೆಗಳ ಶಾಲಾ ಶುಲ್ಕವನ್ನು ಮನ್ನಾ ಮಾಡುವಂತೆ ಬಿಎಸ್‍ಪಿ ಪಕ್ಷದಿಂದ ರಾಜ್ಯ ಸರ್ಕಾರಕ್ಕೆ ಒತ್ತಾಯ…

190
firstsuddi

ಚಿಕ್ಕಮಗಳೂರು : ಸರ್ಕಾರಿ ಮತ್ತು ಖಾಸಗೀ ಶಾಲೆಗಳ ಈ ಬಾರಿಯ ಶಾಲಾ ಶುಲ್ಕವನ್ನು ಮನ್ನಾ ಮಾಡುವಂತೆ ಬಹುಜನ ಸಮಾಜ ಪಕ್ಷದ ಜಿಲ್ಲಾ ಘಟಕ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ಜಿಲ್ಲಾಧಿಕಾರಿ ಡಾ|| ಬಗಾಧಿ ಗೌತಮ್ ಅವರನ್ನು ಇಂದು ಭೇಟಿ ಮಾಡಿದ ಸಮಿತಿಯ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿದರು.
ಕೊರೋನಾ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೊಳಿಸಿದ ಅವೈಜ್ಞಾನಿಕ ಲಾಕ್‍ಡೌನ್‍ನಿಂದಾಗಿ ದೇಶದಲ್ಲಿ 16 ಕೋಟಿ ಅಸಂಘಟಿತ 2 ಕೋಟಿಗೂ ಹೆಚ್ಚು ಸಂಘಟಿತ ವಲಯದ ಕಾರ್ಮಿಕರು ಮತ್ತು 18 ಕೋಟಿಗೂ ಹೆಚ್ಚು ಜನ ಉದ್ಯೋಗ ಕಳೆದುಕೊಂಡು ನಿರುದ್ಯೋಗಿಗಳಾಗಿದ್ದಾರೆ ಎಂದು ಹೇಳಿದರು.
ಲಾಕ್‍ಡೌನ್‍ನ ಪರಿಣಾಮ ಕೆಲಸವಿಲ್ಲದೆ, ವ್ಯವಹಾರವಿಲ್ಲದೆ ಕೋಟ್ಯಾಂತರ ಜನ ಬೀದಿಗೆ ಬಿದ್ದಿದ್ದು, ಒಂದು ಹೊತ್ತಿನ ಊಟಕ್ಕೂ ಏನು ಮಾಡುವುದು ಎಂದು ಪರದಾಡುತ್ತಿರುವ ಅವರು ಶಾಲಾ ಕಾಲೇಜುಗಳ ದುಬಾರಿ ಶುಲ್ಕವನ್ನು ಭರಿಸಲಾಗದೇ ಬವಣೆ ಪಡುತ್ತಿದ್ದಾರೆ ಎಂದು ತಿಳಿಸಿದರು.
ಆನ್‍ಲೈನ್ ಕ್ಲಾಸ್‍ಗಾಗಿ ತಮ್ಮ ಮಕ್ಕಳಿಗೆ ಮೊಬೈಲ್ ಕೊಡಿಸಲೂ ಶಕ್ತಿ ಇಲ್ಲದ ಜನ ಶಾಲಾ ಕಾಲೇಜುಗಳ ದುಬಾರಿ ಶುಲ್ಕವನ್ನು ಭರಿಸುವುದಾದರೂ ಹೇಗೆ ಎಂದು ಪ್ರಶ್ನಿಸಿದ ಪದಾಧಿಕಾರಿಗಳು ಈ ಹಿನ್ನೆಲೆಯಲ್ಲಿ ಖಾಸಗಿ ಮತ್ತು ಸರ್ಕಾರಿ ಶಾಲೆಗಳ ಈ ಬಾರಿಯ ಶಾಲಾ ಶುಲ್ಕವನ್ನು ಮನ್ನಾ ಮಾಡಿ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಒದಗಿಸಬೇಕು ಎಂದು ಆಗ್ರಹಿಸಿದರು.
ಬಿಎಸ್‍ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ರಾಜ್ಯ ಕಾರ್ಯದರ್ಶಿ ಪಿ.ಪರಮೇಶ್ವರ್, ಜಿಲ್ಲಾ ಕಾರ್ಯದರ್ಶಿ ಕೆ.ಆರ್.ಗಂಗಾಧರ್, ಸಹೋದರತ್ವ ಸಮಿತಿ ಮಹಿಳಾ ಘಟಕದ ಅಧ್ಯಕ್ಷೆ ಕೆ.ಬಿ.ಸುಧಾ, ಕೆ.ಎಸ್.ಮಂಜುಳಾ, ತಾಲ್ಲೂಕು ಅಧ್ಯಕ್ಷ ಹರೀಶ್, ಜಿ.ಕೆ.ಬಸವರಾಜ್, ನಾರಾಯಣಮೂರ್ತಿ ಹಾಜರಿದ್ದರು.