ಚಿಕ್ಕಮಗಳೂರು : ಹಾಸ್ಟೆಲ್‌ನಲ್ಲಿಯೇ ಪಿಯುಸಿ ವಿದ್ಯಾರ್ಥಿನಿಗೆ ಹೆರಿಗೆ!

152
firstsuddi

ಚಿಕ್ಕಮಗಳೂರು: ಇಲ್ಲಿನ ಸರ್ಕಾರಿ ಹಾಸ್ಟೆಲ್ ನಲ್ಲಿ ಪಿಯುಸಿ ವಿದ್ಯಾರ್ಥಿನಿಗೆ ಹೆರಿಗೆ ಆಗಿರುವ ಘಟನೆ ನಡೆದಿದ್ದು, ಇದೀಗ ಈ ಸಂಬಂಧ ಪ್ರಕರಣ ದಾಖಲಿಸಿ, ವಾರ್ಡನ್ ಅನ್ನು ವಜಾಗೊಳಿಸುವಂತೆ ದಲಿತ ಸಂಘಟನೆಗಳು ಆಗ್ರಹಿಸಿದೆ.

ದ್ವಿತೀಯ ಪಿಯುಸಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಗೆ ಹಾಸ್ಟೆಲ್ ನಲ್ಲಿ ಹೆರಿಗೆಯಾಗಿದೆ. ಆದರೆ ಈ ವಿಚಾರವನ್ನು ಹೊರಬರಲು ಬಿಡದೇ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ, ಹಾಸ್ಟೆಲ್ ವಾರ್ಡನ್ ಮುಚ್ಚಿ ಹಾಕಿದ್ದಾರೆ. ಇನ್ನೂ ವಿಷಯ ತಿಳಿದು ಬರುತ್ತಿದ್ದಂತೆಯೇ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗೆ ಪ್ರಶ್ನಿಸಿದರೆ ಆಕೆ ಹೊಟ್ಟೆಗೆ ಬಟ್ಟೆ ಕಟ್ಟಿಕೊಳ್ಳುತ್ತಿದ್ದಳು. ಹಾಗಾಗಿ ಗೊತ್ತಾಗಿಲ್ಲ ಎಂದು ಹೇಳುತ್ತಿದ್ದಾರೆ ಎನ್ನಲಾಗುತ್ತಿದೆ. ಇದೀಗ ಯುವತಿಯನ್ನು ಮನೆಗೆ ಕಳಿಸಿ ಹುಡುಗನ ವಿರುದ್ಧ ಪೊಲೀಸರು ಪೋಕ್ಸೋ ಕೇಸ್ ದಾಖಲಿಸಿದ್ದಾರೆ.

ದಲಿತ ಮುಖಂಡರು, ನಮ್ಮ ಮಕ್ಕಳನ್ನ ಹಾಸ್ಟೆಲ್ ಗೆ ಕಳಿಸೋದು ಏಕೆ? ಪೋಷಕರು ಯಾವ ಧೈರ್ಯದ ಮೇಲೆ ಮಕ್ಕಳನ್ನ ಹಾಸ್ಟೆಲ್ ಗೆ ಸೇರಿಸುತ್ತಾರೆ? ಇಬ್ಬರು ವಾರ್ಡನ್ ಗಳು ಏನು ಮಾಡುತ್ತಿದ್ದರು? ಸರ್ಕಾರಿ ಹಾಸ್ಟೆಲ್ ನಲ್ಲೇ ರಕ್ಷಣೆ ಇಲ್ಲ ಅಂದ ಮೇಲೆ ಮಕ್ಕಳನ್ನ ಹೇಗೆ ಕಳಿಸೋದು? ಒಂಭತ್ತು ತಿಂಗಳು ಹೊಟ್ಟೆಗೆ ಬಟ್ಟೆ ಕಟ್ಟಿಕೊಂಡು ಯಾರಿಗೂ ಗೊತ್ತಾಗದಂತೆ ಅದ್ಹೇಗೆ ಇದ್ದಳು? ಸಹಪಾಠಿಗಳು, ಅಡುಗೆಯವರು, ಕಾಲೇಜಿನಲ್ಲಿ ಶಿಕ್ಷಕರು, ವಾರ್ಡನ್ ಗಳಿಗೆ ಒಂಚೂರು ಅನುಮಾನ ಬಾರದಂತೆ 9 ತಿಂಗಳು ಯಾಮಾರಿಸಿದಳಾ ಎಂದು ಪ್ರಶ್ನಿಸಿದ್ದಾರೆ.

ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳೂ ಮಹಿಳೆಯಾಗಿದ್ದಾರೆ. ವಾರ್ಡನ್ ಸಹ ಮಹಿಳೆಯಾಗಿದ್ದು ಏನು ಮಾಡ್ತಿದ್ರು? ಇದು ಅವರಿಗೆ ಗೊತ್ತಿದ್ದೇ ಆಯ್ತಾ ಅಥವಾ ಗೊತ್ತಿಲ್ಲದೇ ಆಯ್ತಾ? ಮಕ್ಕಳ ಭವಿಷ್ಯದ ಬಗ್ಗೆ ಬೇಜವಾಬ್ದಾರಿ ಇರುವ ಇಂತಹ ವಾರ್ಡನ್ ಗಳ ವಿರುದ್ಧ ಕೇಸ್ ದಾಖಲಿಸಿ ಕೆಲಸದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.