ಚೀನಾದಲ್ಲಿ ಲಾಂಗ್ಯಾ ವೈರಸ್ ಪತ್ತೆ – 35 ಜನರಿಗೆ ಸೋಂಕು…

68
firstsuddi

ಬೀಜಿಂಗ್ : ಚೀನಾದಲ್ಲಿ ಲಾಂಗ್ಯಾ ಅಥವಾ ಹೆನಿಪಾವೈರಸ್ ಎಂಬ ಹೊಸ ವೈರಸ್ ದಾಳಿ ಇಟ್ಟಿದೆ. ಈ ವೈರಸ್ ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ. ಮುಖ್ಯವಾಗಿ ಈ ವೈರಸ್ ಮೂತ್ರಪಿಂಡ ಮತ್ತು ಯಕೃತ್ತಿನ ವೈಫಲ್ಯಕ್ಕೆ ಕಾರಣವಾಗುತ್ತದೆ ಎಂದು ವರದಿಯಾಗಿದೆ.

ಶಾಂಡೋಂಗ್ ಮತ್ತು ಹೆನಾನ್ ಪ್ರಾಂತ್ಯಗಳಲ್ಲಿ ಇದುವರೆಗೆ 35 ಜನರು ಸೋಂಕಿಗೆ ಒಳಗಾಗಿದ್ದಾರೆ ಎಂದು ಚೀನಾದ ಮಾಧ್ಯಮಗಳು ವರದಿ ಮಾಡಿವೆ.

ಲಾಂಗ್ಯಾ ವೈರಸ್ ನಿಪಾ ವೈರಸ್ ಕುಟುಂಬದಿಂದ ಬಂದಿದೆ. ನಿಪಾ ವೈರಸ್ ಸಾಮಾನ್ಯವಾಗಿ ಬಾವಲಿಗಳಲ್ಲಿ ಕಂಡುಬರುತ್ತದೆ. ಕೋವಿಡ್ ನಂತೆ, ನಿಪಾವು ಉಸಿರಾಟದ ಮೂಲಕವೂ ಹರಡಬಹುದು. ಪ್ರಸ್ತುತ ನಿಪಾಗೆ ಯಾವುದೇ ಲಸಿಕೆ ಲಭ್ಯವಿಲ್ಲ.

ಆಗಸ್ಟ್ 4 ರಂದು ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ ನಲ್ಲಿ ಪ್ರಕಟವಾದ “ಎ ಝೂನೋಟಿಕ್ ಹೆನಿಪಾವೈರಸ್ ಇನ್ ಫೆಬ್ರೈಲ್ ಪೇಷಂಟ್ಸ್ ಇನ್ ಚೀನಾ” ಅಧ್ಯಯನವು ಜ್ವರವನ್ನು ಉಂಟುಮಾಡುವ ಮಾನವನ ಅನಾರೋಗ್ಯಕ್ಕೆ ಸಂಬಂಧಿಸಿದ ಹೊಸ ಹೆನಿಪಾವೈರಸ್ ಅನ್ನು ಚೀನಾದಲ್ಲಿ ಗುರುತಿಸಲಾಗಿದೆ ಎಂದು ಹೇಳಿದೆ.

ಲಕ್ಷಣಗಳು ಏನು? : ಡಿಎನ್ ಎ ವರದಿಯ ಪ್ರಕಾರ, 26 ರೋಗಿಗಳಲ್ಲಿ ಜ್ವರ, ಆಯಾಸ, ಕೆಮ್ಮು, ಹಸಿವಿನ ಕೊರತೆ, ಸ್ನಾಯು ನೋವು, ವಾಕರಿಕೆ, ತಲೆನೋವು ಮತ್ತು ವಾಂತಿ ಸೇರಿದಂತೆ ರೋಗಲಕ್ಷಣಗಳು ಕಂಡುಬಂದಿವೆ.