ಭುವನೇಶ್ವರ: ಛತ್ತೀಸಗಢದ ಗರಿಯಾಬಂದ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಗುಂಡಿನ ಚಕಮಕಿಯಲ್ಲಿ ಹಿರಿಯ ಕೇಡರ್ ಸೇರಿದಂತೆ ಕನಿಷ್ಠ 14 ನಕ್ಸಲರು ಹತ್ಯೆಯಾಗಿದ್ದಾರೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ. ಕೇಂದ್ರೀಯ ಮೀಸಲು ಪೊಲೀಸ್ ಪಡೆ, ಸೋಜಿ ಒಡಿಶಾ ಮತ್ತು ಛತ್ತೀಸ್‍ಗಢ ಪೊಲೀಸರು ಅಂತರರಾಜ್ಯ ಗಡಿಯಲ್ಲಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮಾವೋವಾದಿಗಳನ್ನು ಎನ್‍ಕೌಂಟರ್ ಮಾಡಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ. ನಕ್ಸಲ್ ಮುಕ್ತ ಭಾರತದ ಸಂಕಲ್ಪ ಮತ್ತು ಭದ್ರತಾ ಪಡೆಗಳ ಜಂಟಿ ಪ್ರಯತ್ನದಿಂದ ನಕ್ಸಲರು ಇಂದು ಕೊನೆಯುಸಿರೆಳೆದಿದ್ದಾರೆ. ಇದು ನಕ್ಸಲಿಸಂಗೆ ಮತ್ತೊಂದು ಪ್ರಬಲ ಹೊಡೆತ. ನಕ್ಸಲ್ ಮುಕ್ತ ಭಾರತ ನಿರ್ಮಾಣದಲ್ಲಿ ನಮ್ಮ ಭದ್ರತಾ ಪಡೆಗಳು ಪ್ರಮುಖ ಯಶಸ್ಸನ್ನು ಸಾಧಿಸಿವೆ ಎಂದು ತಿಳಿಸಿದ್ದಾರೆ. ನಿನ್ನೆ ಮುಂಜಾನೆ ನಡೆದ ಜಂಟಿ ಕಾರ್ಯಾಚರಣೆ ವೇಳೆ ನಡೆದ ಎನ್‌ಕೌಂಟರ್ ನಲ್ಲಿ ಇಬ್ಬರು ಮಹಿಳಾ ನಕ್ಸಲರು ಮೃತಪಟ್ಟಿದ್ದಾರೆ. ಹಾಗೂ ಕೋಬ್ರಾ ಜವಾನನೊಬ್ಬ ಗಾಯಗೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.










