ಜಗತ್ತಿನ ಅತ್ಯಂತ ಹಿರಿಯ ಮಹಿಳೆ ಲುಸಿಲ್ ರಾಂಡನ್ ನಿಧನ…

56
firstsuddi

ಪ್ಯಾರಿಸ್ : ವಿಶ್ವದ ಅತ್ಯಂತ ಹಿರಿಯ ಮಹಿಳೆ ಎನಿಸಿಕೊಂಡಿದ್ದ ಫ್ರೆಂಚ್ ನ ಲುಸಿಲ್ ರಾಂಡನ್ ಅವರು ನಿನ್ನೆ ನಿಧರಾಗಿದ್ದಾರೆ.

ಸಿಸ್ಟರ್ ಆ್ಯಂಡ್ರೆ ಎಂಬ ಹೆಸರಿನಿಂದ ಖ್ಯಾತರಾಗಿದ್ದ ಅವರಿಗೆ 118 ವಯಸ್ಸಾಗಿತ್ತು. ಲುಸಿಲ್ ರಾಂಡನ್ ಮೊದಲ ಮಹಾಯುದ್ಧಕ್ಕೂ 1 ದಶಕದ ಮೊದಲೇ 1904ರ ಫೆಬ್ರವರಿ 11 ರಂದು ದಕ್ಷಿಣ ಫ್ರಾನ್ಸ್ ನಲ್ಲಿ ಜನಿಸಿದ್ದರು.

ರಾಂಡನ್ ನಿನ್ನೆ ತಮ್ಮ 118 ನೇ ವಯಸ್ಸಿನಲ್ಲಿ ಟೌಲೋನ್ ನಲ್ಲಿರುವ ನರ್ಸಿಂಗ್ ಹೊಮ್ ನಲ್ಲಿ ನಿದ್ರೆಗೆ ಜಾರಿದ್ದ ವೇಳೆಯೇ ಸಾವನ್ನಪ್ಪಿದ್ದಾರೆ. ರಾಂಡನ್ ಸಾವು ತುಂಬಾ ನೋವು ತಂದಿದೆ. ಆದರೆ ಆಕೆಯ ಪ್ರೀತಿಯ ಸಹೋದರನನ್ನು ಸೇರುವುದು ಆಕೆಯ ಬಯಕೆಯಾಗಿತ್ತು. ಆಕೆಯ ಸಾವು ಒಂದು ವಿಮೋಚನೆಯಾಗಿದೆ ಎಂದು ನರ್ಸಿಂಗ್ ಹೋಮ್ ವಕ್ತಾರ ಡೇವಿಡ್ ಟವೆಲ್ಲಾ ತಿಳಿಸಿದ್ದಾರೆ.

ಕಳೆದ ವರ್ಷ ತೀರಿದ ಜಪಾನಿನ 119 ವರ್ಷದ ಕೇನ್ ತನಕಾ ಜಗತ್ತಿನ ಅತ್ಯಂತ ಹಿರಿಯ ವ್ಯಕ್ತಿ ಎನ್ನಿಸಿಕೊಂಡಿದ್ದರು. ಆನಂತರ ಸಿಸ್ಟರ್ ಆ್ಯಂಡ್ರೆ ಜಗತ್ತಿನ ಅತ್ಯಂತ ಹಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 2022ರ ಏಪ್ರಿಲ್ ನಲ್ಲಿ ಗಿನ್ನೀಸ್ ವಿಶ್ವದಾಖಲೆ ಪಟ್ಟಿಯಲ್ಲಿ ಇವರ ಹೆಸರು ಸೇರಿತು.

ಸಿಸ್ಟರ್ ಆ್ಯಂಡ್ರೆ ಎರಡನೇ ಮಹಾಯುದ್ಧದ ಸಮಯದಲ್ಲಿ ಮಕ್ಕಳಿಗೆ ಶಿಕ್ಷಕಿಯಾಗಿ ಪಾಠ ಹೇಳಿಕೊಟ್ಟಿದ್ದರು. ಜೊತೆಗೆ ಶೈಕ್ಷಣಿಕ ಆಡಳಿತ ಉಸ್ತುವಾರಿಯನ್ನೂ ನಿಭಾಯಿಸಿದ್ದರು. ಯುದ್ಧದ ಬಳಿಕ ಸುಮಾರು ಮೂವತ್ತು ವರ್ಷಗಳ ಕಾಲ ಹಿರಿಯ ನಾಗರಿಕರು ಮತ್ತು ಅನಾಥರ ಏಳಿಗೆಗಾಗಿ ಕೆಲಸ ಮಾಡಿದರು. ಕ್ಯಾಥೊಲಿಕ್ ಸನ್ಯಾಸಿನಿಯಾಗುವ ಮೊದಲು ಮೂವತ್ತು ವರ್ಷಗಳ ಕಾಲ ಫ್ರಾನ್ಸ್ ನ ಆಸ್ಪತ್ರೆಗಳಲ್ಲಿ ಕೆಲಸ ಮಾಡಿದ್ದರು.