ಬೆಂಗಳೂರು : ಶಾಸಕ ಜಮೀರ್ ಅಹ್ಮದ್ ಖಾನ್ ನಿವಾಸ, ಕಚೇರಿಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಪ್ರಕರಣಗಳು ಬಾಕಿ ಉಳಿದಿದ್ದವು. ಸಾಕ್ಷಿ ಆಧರಿಸಿ ಎಸಿಬಿ ಕೆಲಸ ಮಾಡುತ್ತಿದೆ. ದಾಖಲೆಗಳನ್ನು ಆಧರಿಸಿ ಪ್ರಕರಣ ದಾಖಲಿಸುತ್ತಿದೆ. ಇದು ನಿರಂತರವಾದ ಪ್ರಕ್ರಿಯೆ ಎಂದು ತಿಳಿಸಿದ್ದಾರೆ.
ಶಾಸಕ ಜಮೀರ್ ಅಹ್ಮದ್ ಮನೆ ಹಾಗೂ ಕಚೇರಿಗಳ ಮೇಲೆ ಎಸಿಬಿ ದಾಳಿ ರಾಜಕೀಯ ಪ್ರೇರಿತ ಎಂದು ಟೀಕಿಸಿರುವ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ, ಇದು ಅವರ ಹೊಸ ಡೈಲಾಗ್ ಅಲ್ಲ. ಪ್ರಕರಣಗಳನ್ನು ಬಾಕಿ ಉಳಿಸಿಕೊಳ್ಳಬೇಡಿ ಅಂತಾ ಕೋರ್ಟ್ ಹೇಳುತ್ತೆ. ಆ ಕರ್ತವ್ಯ ಮಾಡೋಕೆ ಹೋದಾಗ ಅಡಚಣೆ ಮಾಡುವುದು, ಅದಕ್ಕೆ ರಾಜಕೀಯ ಬಣ್ಣ ಕೊಡುವುದು ಸರ್ವೇ ಸಾಮಾನ್ಯ ಎಂದು ಹೇಳಿದ್ದಾರೆ.










