ಬೆಂಗಳೂರು : ಪಿಎಸ್ ಐ ಹಗರಣದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಆರಗ ಜ್ಞಾನೇಂದ್ರ ಅವರನ್ನು ಸಂಪುಟದಿಂದ ಕೈಬಿಡುವಂತೆ ಆಗ್ರಹಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಕಪಾಟಿನೊಳಗಿಂದ ಒಂದೊಂದೇ ಅಸ್ತಿಪಂಜರಗಳು ಹೊರಗೆ ಬೀಳುತ್ತಿವೆ. ಪಿಎಸ್ಐ ನೇಮಕಾತಿ ಹಗರಣದಲ್ಲಿ ಎಡಿಜಿಪಿ ಅಮೃತಪೌಲ್ ಬಂಧನವೇ ಇದಕ್ಕೆ ಸಾಕ್ಷಿ. ಹಗರಣವೇ ನಡೆದಿಲ್ಲ ಎಂದು ಮೈಮೇಲೆ ಬರುತ್ತಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಗೃಹಸಚಿವ ಆರಗ ಜ್ಞಾನೇಂದ್ರ ಈಗ ಏನು ಹೇಳುತ್ತಾರೆ? ಎಂದು ಪ್ರಶ್ನಿಸಿದ್ದಾರೆ.
ಪಿಎಸ್ಐ ನೇಮಕಾತಿ ಹಗರಣದಲ್ಲಿ ಅಧಿಕಾರಿಗಳನ್ನು ಮಾತ್ರ ಹೊಣೆ ಮಾಡಿ ಜಾರಿಕೊಳ್ಳುವುದು ಬೇಡ. ಈ ಹಗರಣಕ್ಕೆ ಅಧಿಕಾರಿಗಳಷ್ಟೇ ಆರಗ ಜ್ಞಾನೇಂದ್ರ ಅವರೂ ಕಾರಣ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೊದಲು ಗೃಹ ಸಚಿವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಸಿದ್ದರಾಮಯ್ಯ ಅವರು ಒತ್ತಾಯಿಸಿದ್ದಾರೆ.










