ಶ್ರೀನಗರ : ಕಾಂಗ್ರೆಸ್ ನ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಜಮ್ಮು ಕಾಶ್ಮೀರ ಕಾಂಗ್ರೆಸ್ ಘಟಕದ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಗುಲಾಂ ನಬಿ ಆಜಾದ್ ಅವರನ್ನು ಜಮ್ಮು-ಕಾಶ್ಮೀರ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿ ನೇಮಿಸಲಾಗಿತ್ತು. ನೇಮಕಾತಿ ಆದೇಶ ಹೊರಬಿದ್ದ ಕೆಲಹೊತ್ತಿನಲ್ಲಿಯೇ ಅವರು ರಾಜೀನಾಮೆ ನೀಡುವ ನಿರ್ಧಾರ ಪ್ರಕಟಿಸಿದರು. ಪಕ್ಷದ ಜಮ್ಮು ಕಾಶ್ಮೀರ ರಾಜಕೀಯ ವ್ಯವಹಾರ ಸಮಿತಿಗೂ ಆಜಾದ್ ರಾಜೀನಾಮೆ ನೀಡಿದ್ದಾರೆ. ಗುಲಾಂ ನಬಿ ಆಜಾದ್ ಅವರು ಆರೋಗ್ಯದ ಕಾರಣಗಳನ್ನು ನೀಡಿ, ಹೊಸ ಜವಾಬ್ದಾರಿಯನ್ನು ವಹಿಸಿಕೊಳ್ಳಲು ನಿರಾಕರಿಸಿರುವುದಾಗಿ ಮೂಲಗಳು ತಿಳಿಸಿವೆ.
ಜಮ್ಮು ಕಾಶ್ಮೀರ ಕಾಂಗ್ರೆಸ್ ಸಮಿತಿಗೆ ಗುಲಾಂ ನಬಿ ಆಜಾದ್ ಅವರ ಆಪ್ತ ಗುಲಾಂ ಅಹ್ಮದ್ ಮಿರ್ ಈ ಹಿಂದೆ ಅಧ್ಯಕ್ಷರಾಗಿದ್ದರು. ಜುಲೈ 6ರಂದು ಮಿರ್ ಸಲ್ಲಿಸಿದ್ದ ರಾಜೀನಾಮೆಯನ್ನು ಸೋನಿಯಾ ಗಾಂಧಿ ಅಂಗೀಕರಿಸಿದ್ದರು. ನಿನ್ನೆಯಷ್ಟೇ ಜಮ್ಮು ಕಾಶ್ಮೀರ ಕಾಂಗ್ರೆಸ್ ಸಮಿತಿಗೆ ಹೊಸ ಅಧ್ಯಕ್ಷರಾಗಿ ವಿಕರ್ ರಸೂಲ್ ವಾನಿ ಅವರನ್ನು ನೇಮಿಸಲಾಗಿತ್ತು. ಈ ಬೆಳವಣಿಗೆಯೂ ಗುಲಾಂ ನಬಿ ಆಜಾದ್ ಅವರಿಗೆ ಸರಿಕಂಡಿರಲಿಲ್ಲ.
ಈ ಮೊದಲು ಜಮ್ಮು ಕಾಶ್ಮೀರ ಕಾಂಗ್ರೆಸ್ ಸಮಿತಿಗೆ ಗುಲಾಂ ನಬಿ ಆಜಾದ್ ಅವರನ್ನೇ ಅಧ್ಯಕ್ಷರಾಗಿ ನೇಮಿಸಲಾಗುವುದು ಎಂಬ ಮಾತುಗಳು ಹರಿದಾಡುತ್ತಿದ್ದವು.










