ಬೆಂಗಳೂರು: ಜುಲೈ ಅಂತ್ಯದೊಳಗೆ ಕರ್ನಾಟಕಕ್ಕೆ ಎರಡನೇ ವಂದೇ ಭಾರತ್ ರೈಲು ಲಭ್ಯವಾಗಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಘೋಷಿಸಿದ್ದಾರೆ.
ಬಹುನಿರೀಕ್ಷಿತ ಧಾರವಾಡ-ಬೆಂಗಳೂರು ಮಧ್ಯೆ ವಂದೇ ಭಾರತ ರೈಲು ಸಂಚಾರಕ್ಕೆ ಕೊನೆಯ ಹಂತದ ಸಿದ್ಧತೆ ನಡೆಯುತ್ತಿದ್ದು, ರಾಜ್ಯದಲ್ಲಿ ಓಡಾಟ ನಡೆಸುವ ಎರಡನೇ ವಂದೇ ಭಾರತ್ ರೈಲು ಇದಾಗಿದೆ. ರೈಲು ಸೇವೆಯ ಆರಂಭಕ್ಕೆ ಅಗತ್ಯವಿರುವ ಎಲ್ಲಾ ಸಿದ್ಧತೆಗಳು ಪೂರ್ಣವಾದ ಹಿನ್ನಲೆ, ಕೇಂದ್ರ ರೈಲ್ವೇ ಮಂತ್ರಿ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿರುವ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾಹಿತಿ ನೀಡಿದ್ದಾರೆ.
ದೇಶದ ಅತಿ ವೇಗದ ರೈಲು ಇದಾಗಿದ್ದು, ಗಂಟೆಗೆ ಗರಿಷ್ಠ 160 ಕಿ.ಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಐಷರಾಮಿ ವ್ಯವಸ್ಥೆ ಸೀಟುಗಳನ್ನು ವಿಮಾನದ ರೀತಿ ನಿರ್ಮಿಸಲಾಗಿದ್ದು, ವಿಶ್ವದರ್ಜೆಯ ಪ್ರಯಾಣಿಕರ ಸೌಕರ್ಯ ಹೊಂದಿದೆ.
ಹವಾನಿಯಂತ್ರಿತ ಎಕಾನಮಿ ಮತ್ತು ಪ್ರೀಮಿಯಂ ಕ್ಲಾಸ್ಗಳು, ಆನ್ಬೋರ್ಡ್ ಉಪಾಹಾರದ ವ್ಯವಸ್ಥೆ, ರೀಡಿಂಗ್ ಲೈಟ್ ವ್ಯವಸ್ಥೆ, ಸ್ವಯಂ ಚಾಲಿತ ಬಾಗಿಲು, ವೈಫೈ, ಮಾಹಿತಿ ಪಡೆಯಬಹುದಾಗಿದೆ. ಚಾರ್ಜಿಂಗ್ ಪಾಯಿಂಟ್, ಸಿಸಿಟಿವಿ, ಬಯೋ ಶೌಚಾಲಯ ವ್ಯವಸ್ಥೆ ಒಳಗೊಂಡಿರುವ ರೈಲು ಇದಾಗಿದೆ.
ಇದು ಕರ್ನಾಟಕದಲ್ಲಿ ಆರಂಭವಾಗಲಿರುವ ಎರಡನೇ ವಂದೇ ಭಾರತ್ ರೈಲು. ಮೊದಲ ರೈಲು ಈಗಾಗಲೇ ಮೈಸೂರು-ಬೆಂಗಳೂರು-ಚೆನ್ನೈ ಮಾರ್ಗದಲ್ಲಿ ಸಂಚರಿಸುತ್ತಿದೆ. ಮಾರ್ಚ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ರೈಲಿಗೆ ಚಾಲನೆ ನೀಡಿದ್ದರು.










