ಜೂನ್ 5ರಿಂದ ಸ್ಯಾಂಡಲ್‌ವುಡ್ ಶಟ್ ಡೌನ್ ಆಗಲಿದೆ. ಸಿನಿಮಾಗಳ ಹೊರಾಂಗಣ ಚಿತ್ರೀಕರಣಕ್ಕೆ ಬ್ರೇಕ್ ಬೀಳುತ್ತಿದೆ. ಸಂಬಳ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹೊರಾಂಗಣ ಚಿತ್ರೀಕರಣ ಕಾರ್ಮಿಕರ ಸಂಘ ಬಂದ್‌ಗೆ ಕರೆ ನೀಡಿದೆ. ಈ ಬಗ್ಗೆ ಹೊರಾಂಗಣ ಚಿತ್ರೀಕರಣ ಘಟಕದ ಅಧ್ಯಕ್ಷ ಎ.ಹೆಚ್ ಭಟ್ ಬಹಿರಂಗ ಪಡಿಸಿದ್ದಾರೆ.
ಹೊರಾಂಗಣ ಚಿತ್ರೀಕರಣ ಕಾರ್ಮಿಕರು ಕಳೆದ ಮೂರು ವರ್ಷಗಳಿಂದ ಬೇಡಿಕೆ ಇಡುತ್ತಾ ಬರುತ್ತಿದ್ದಾರೆ. ಈ ಸಂಬಂಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿರ್ಮಾಪಕರ ಸಂಘಕ್ಕೆ ಮನವಿ ಕೂಡ ಕೊಟ್ಟಿದ್ದಾರೆ. ಆದರೆ, ಈ ಬಗ್ಗೆ ಯಾವುದೇ ಗಮನ ಹರಿಸದ ಕಾರಣ ಹೊರಾಂಗಣ ಚಿತ್ರೀಕರಣಕ್ಕೆ ಬ್ರೇಕ್ ಹಾಕಲಾಗಿದೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ನಿರ್ಮಾಪಕರ ಸಂಘ ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸಂಘ ಆಗ್ರಹಿಸಿದೆ. ಒಂದು ವೇಳೆ ತಮ್ಮ ಬೇಡಿಕೆಯನ್ನು ಈಡೇರಿಸದೇ ಹೋದರೆ ಜೂನ್ 5 ರಿಂದ ಹೊರಾಂಗಣ ಚಿತ್ರೀಕರಣ ಬಂದ್ ಮಾಡಲು ಕಾರ್ಮಿಕರ ಸಂಘ ನಿರ್ಧರಿಸಿದೆ. ಅಷ್ಟೆ ಅಲ್ಲ ಪ್ರತಿ ವರ್ಷ ಸುಮಾರು 200ರಿಂದ 300 ಚಿತ್ರಗಳು ಬಿಡುಗಡೆಯಾಗುತ್ತಿದೆ. ಸರ್ಕಾರ 125 ಚಿತ್ರಗಳಿಗೆ ಸಬ್ಸಿಡಿ ಕೊಡುತ್ತಿದೆ. ಇದನ್ನ ಪಡೆಯಬೇಕಾದರೆ ಹೊರಾಂಗಣ ಚಿತ್ರೀಕರಣ ಸರಬರಾಜು ಮಾಡುವ ಮಾಲೀಕರ ಸಹಿ ಇರಬೇಕು. ಆದರೆ ಹಾಗೆ ನಡೆಯುತ್ತಿಲ್ಲ ಎಂದು ಎ.ಹೆಚ್ ಭಟ್ ಆರೋಪಿಸಿದ್ದಾರೆ.










