ನವದೆಹಲಿ : ಸಂಸತ್ ನ ಚಳಿಗಾಲದ ಅಧಿವೇಶನ ಡಿಸೆಂಬರ್ 7ರಿಂದ 29ರ ವರೆಗೆ ನಡೆಯಲಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ಮಾಹಿತಿ ನೀಡಿದ್ದಾರೆ.
2022ರ ಚಳಿಗಾಲದ ಅಧಿವೇಶನ ಡಿಸೆಂಬರ್ 7ರಿಂದ 29ರ ವರೆಗೆ ನಡೆಯಲಿದ್ದು, ಈ 23 ದಿನಗಳ ಅವಧಿಯಲ್ಲಿ 17 ಕಲಾಪಗಳು ನಡೆಯಲಿವೆ. ಅಧಿವೇಶನದಲ್ಲಿ ಶಾಸಕಾಂಗ ವ್ಯವಹಾರ ಮತ್ತು ಇತರ ವಿಷಯಗಳ ಕುರಿತಾದ ಚರ್ಚೆಗಳನ್ನು ಅಮೃತ ಕಾಲವು ಎದುರು ನೋಡುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.
ಜಗದೀಪ್ ಧನ್ಕರ್ ಅವರು ಉಪ ರಾಷ್ಟ್ರಪತಿಯಾದ ಬಳಿಕ ನಡೆಯುತ್ತಿರುವ ಮೊದಲ ಸಂಸತ್ ಅಧಿವೇಶನ ಇದಾಗಿದ್ದು, ಅವರು ಮೊದಲ ಬಾರಿಗೆ ರಾಜ್ಯಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.
ಇತ್ತೀಚೆಗೆ ಸಮಾಜವಾದಿ ಪಕ್ಷದ ಹಿರಿಯ ನಾಯಕ ಮುಲಾಯಂ ಸಿಂಗ್ ಯಾದವ್ ಸೇರಿ ಹಾಲಿ ಸದಸ್ಯರ ನಿಧನದ ಗೌರವಾರ್ಥ ಅಧಿವೇಶನದ ಮೊದಲ ದಿನವನ್ನು ಮುಂದೂಡುವ ಸಾಧ್ಯತೆ ಇದೆ. ಅಧಿವೇಶನದಲ್ಲಿ ಮಂಡಿಸಬೇಕಾದ ಮಸೂದೆಗಳ ಪಟ್ಟಿಯನ್ನು ಸರ್ಕಾರ ಸಿದ್ಧಪಡಿಸಿದೆ. ಆದರೆ, ಪ್ರತಿಪಕ್ಷಗಳು ಮಸೂದೆಗಳ ಬಗ್ಗೆ ಚರ್ಚೆಗೆ ಪಟ್ಟು ಹಿಡಿಯುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.










