ಬೆಂಗಳೂರು : ರಾಜ್ಯ ಚುನಾವಣೆ ಹೊಸ್ತಿಲಿನಲ್ಲಿಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೆ ಮತ್ತೆ ಜಾರಿ ನಿರ್ದೇಶನಾಲಯ ನೋಟಿಸ್ ನೀಡಿದ್ದು, ಫೆಬ್ರವರಿ 22ರಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿ.ಕೆ ಶಿವಕುಮಾರ್, ನನಗೆ ಫೆ.22 ರಂದು ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ(ಇಡಿ) ನೋಟಿಸ್ ನೀಡಿದೆ. ನಾನು ಪ್ರಜಾಧ್ವನಿ ಸಮಾವೇಶ ನಡೆಸಬೇಕಾ ಅಥವಾ ಇಡಿ ಮುಂದೆ ಹಾಜರಾಗಬೇಕಾ ಎಂದು ಹೇಳಿದ್ದಾರೆ.
ಇಡಿ ವಿರೋಧ ಪಕ್ಷದವರಿಗೆ ಮಾತ್ರ ನೋಟಿಸ್ ನೀಡುತ್ತದೆ. ನನ್ನ ಮಗಳಿಗೂ ನೋಟಿಸ್ ನೀಡಿದ್ದಾರೆ. ನಿಮ್ಮ ಕಾಲೇಜಿನಲ್ಲಿ ಎಷ್ಟು ಶುಲ್ಕ ಕಟ್ಟಲಾಗಿದೆ. ವಿದ್ಯಾರ್ಥಿಗಳ ಪರೀಕ್ಷೆಯ ರಿಸಲ್ಟ್ ಕುರಿತು ಕೇಳಿದ್ದಾರೆ. ಪ್ರತಿ ಬಾರಿ ವಿಚಾರಣೆಗೆ ಹೋದಾಗ ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿ ಬರುತ್ತಿದ್ದೇನೆ. ಆದರೂ ಮತ್ತೆ ನೋಟಿಸ್ ನೀಡುತ್ತಿದ್ದಾರೆ ಎಂದು ಹೇಳಿದರು.
ಡಿ.ಕೆ ಶಿವಕುಮಾರ್ ಅವರ ಪುತ್ರಿ ಐಶ್ವರ್ಯಗೂ ಸಿಬಿಐ ನೋಟಿಸ್ ಕೊಟ್ಟಿದ್ದು, 10 ದಿನದಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ.
ಡಿಕೆಶಿ ಅಕ್ರಮ ಆಸ್ತಿ ಸಂಪಾದನೆ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ಎರಡು ತಿಂಗಳ ಹಿಂದೆ ಡಿಕೆಶಿ ಒಡೆತನದ ಕಾಲೇಜಿನಲ್ಲಿ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದರು. ಎರಡು ತಿಂಗಳು ನಿರಂತರವಾಗಿ ದಾಖಲೆಗಳನ್ನು ಪರಿಶೀಲಿಸಿ ಬಳಿಕ ಗ್ಲೋಬಲ್ ಕಾಲೇಜಿನಲ್ಲಿ ನಿರ್ದೇಶಕಿ ಆಗಿರುವ ಐಶ್ವರ್ಯಗೆ ನೋಟಿಸ್ ನೀಡಿದ್ದಾರೆ. ಕಾಲೇಜಿನ ಫೀಸ್, ಕಾಲೇಜಿನ ಆಯವ್ಯಯ ಪಟ್ಟಿಯ ಸಮೇತ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.
ಐಶ್ವರ್ಯ ಮಾತ್ರವಲ್ಲದೇ ಕಾಲೇಜಿನ ಎಲ್ಲಾ ನಿರ್ದೇಶಕರಿಗೆ ನೋಟಿಸ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.










