ಡಿಕೆಶಿ ವಿರುದ್ಧದ ಇಡಿ ಪ್ರಕರಣ ; ವಿಚಾರಣೆ ಮೇ 31ಕ್ಕೆ ಮುಂದೂಡಿದ ನ್ಯಾಯಾಲಯ.

60
firstsuddi

ನವದೆಹಲಿ : ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ವಿರುದ್ಧದ ಇಡಿ ಪ್ರಕರಣ ಸಂಬಂಧ ಇಂದು ದೆಹಲಿಯ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು.

ನ್ಯಾಯಮೂರ್ತಿ ವಿಕಾಸ್ ದುಲ್ ರವರ ಪೀಠದಲ್ಲಿ ವಿಚಾರಣೆ ನಡೆದಿದ್ದು, ವಿಚಾರಣೆ ವೇಳೆ ಅಕ್ರಮ ಹಣ ವರ್ಗಾವಣೆ ತಡೆ PMLA)ನಲ್ಲಿ IPC 120B(ವ್ಯವಸ್ಥಿತ ಪಿತೂರಿ) ಸೇರ್ಪಡೆ ಬಗ್ಗೆ ಕೋರ್ಟ್ ಸ್ಪಷ್ಟನೆ ಪಡೆಯಿತು. ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಶೇಷ ನ್ಯಾಯಾಲಯಕ್ಕೆ ನಿನ್ನೆ ಜಾರ್ಜ್ ಶೀಟ್ ಸಲ್ಲಿಸಿದ್ದರು. ಜಾರ್ಜ್ ಶೀಟ್ ನಲ್ಲಿ 120B ಉಲ್ಲೇಖಕ್ಕೆ ಸಂಬಂಧಿಸಿದಂತೆ ಇಂದು ಕೋರ್ಟ್ ಮುಂದೆ ಹಾಜರಾಗಿ ಸ್ಪಷ್ಟನೆ ನೀಡಿದರು.

ಇಡಿ ಪರ ವಾದ ಮಂಡಿಸಿದ ವಕೀಲರು, PMLA ಜೊತೆಗೆ IPC 120B ಜೊತೆಗೂಡಿಸಿ ತನಿಖೆ ನಡೆಸಬಹುದು ಮತ್ತು ಅದನ್ನು ವಿಚಾರಣೆ ನಡೆಸುವ ಅಧಿಕಾರವೂ ವಿಶೇಷ ನ್ಯಾಯಾಲಯಕ್ಕಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ವಕೀಲರನ್ನು ನ್ಯಾಯಾಂಗ ವ್ಯಾಪ್ತಿಯ ಬಗ್ಗೆ ನ್ಯಾಯಾಧೀಶ ವಿಕಾಸ್ ದುಲ್ ಪ್ರಶ್ನೆ ಮಾಡಿದರು.

ಇದಕ್ಕೆ ಉತ್ತರಿಸಿದ ವಕೀಲರು, ದೆಹಲಿಯ ಸಬ್ದರಜಂಗ್ ಎನ್ಕ್ಲೇವ್ ನಲ್ಲಿರುವ ಡಿ.ಕೆ ಶಿವಕುಮಾರ್ ನಿವಾಸದಲ್ಲಿ ಐಟಿ ದಾಳಿ ವೇಳೆ 8.5 ಕೋಟಿ ಹಣ ದೊರಕಿತ್ತು, ಈ ಹಿನ್ನಲೆ ದೆಹಲಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ಸ್ಪಷ್ಟನೆ ನೀಡಿದರು. ವಾದವನ್ನು ಆಲಿಸಿದ ನ್ಯಾಯಾಧೀಶರು ಪಿಎಂಎಲ್ ಎ ನ್ಯಾಯಾಲಯ IPC 120B ವಿಚಾರಣೆ ನಡೆಸುವ ಬಗ್ಗೆ ಪರಿಶೀಲನೆ ನಡೆಸುವುದಾಗಿ ತಿಳಿಸಿ ವಿಚಾರಣೆಯನ್ನು ಮೇ 31 ಕ್ಕೆ ಮುಂದೂಡಿದರು.