ನವದೆಲಿ : ಸ್ವಿಗ್ಗಿ ಡೆಲಿವರಿ ಬಾಯ್ ಗೆ ಕಾರು ಡಿಕ್ಕಿ ಹೊಡೆದು 500 ಮೀ.ಗೂ ಹೆಚ್ಚು ದೂರ ಎಳೆದೊಯ್ದು ಘಟನೆ ದೆಹಲಿಯ ನೊಯ್ಡಾದಲ್ಲಿ ನಡೆದಿದೆ.
ಭಾನುವಾರ ನಡೆದಿರುವ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಮೃತನನ್ನು ಉತ್ತರ ಪ್ರದೇಶದ ಮೈನ್ ಪುರಿ ನಿವಾಸಿ ಕೌಶಲ್ ಯಾದವ್ ಎಂದು ಗುರುತಿಸಲಾಗಿದೆ.
ಸ್ವಿಗ್ಗಿಯಲ್ಲಿ ಕೆಲಸ ಮಾಡುತ್ತಿದ್ದ ಕೌಶಲ್ ಹೊಸ ವರ್ಷದ ರಾತ್ರಿ ಫುಡ್ ಡೆಲಿವರಿ ನೀಡಲು ಹೊರಟಿದ್ದಾಗ ನೋಯ್ಡಾ ಸೆಕ್ಟರ್ 14ರ ಫ್ಲೈಓವರ್ ಬಳಿ ಕಾರೊಂದು ಅವರ ಬೈಕ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕೌಶಲ್ ಬೈಕ್ ನಿಂದ ಕೆಳಗೆ ಬಿದ್ದಿದ್ದಾನೆ. ಈ ವೇಳೆ ಆತ ಕಾರಿಗೆ ಸಿಲುಕಿದ್ದು, ಆತನನ್ನು ಆ ಕಾರು ಎಳೆದೊಯ್ದಿದೆ.
ಅಪಘಾತ ನಡೆದ ಸ್ಥಳದಿಂದ ಸುಮಾರು 500 ಮೀಟರ್ ದೂರದಲ್ಲಿರುವ ದೇವಸ್ಥಾನದ ಬಳಿ ಚಾಲಕ ಕಾರನ್ನು ನಿಲ್ಲಿಸಿದ್ದಾನೆ. ನಂತರ ಆತ ಅಲ್ಲಿಂದ ಪರಾರಿಯಾಗಿದ್ದಾನೆ. ಕೌಶಲ್ ಗೆ ಅವರ ಸಹೋದರ ಅಮಿತ್ ಫೋನ್ ಮಾಡಿದಾಗ ದಾರಿಹೋಕರೊಬ್ಬರು ಆ ಕರೆ ಸ್ವೀಕರಿಸಿ ಅಪಘಾತದ ಬಗ್ಗೆ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಮೃತ ವ್ಯಕ್ತಿಯ ಕುಟುಂಬದವರು 1ನೇ ಹಂತದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹಿಟ್ ಅಂಡ್ ರನ್ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ದೆಹಲಿಯ ಹೊರವಲಯದ ಕಂಝವಾಲಾ ಪ್ರದೇಶದಲ್ಲಿ ಡಿಸೆಂಬರ್ 31 ಮತ್ತು ಜನವರಿ 1ರ ತಡರಾತ್ರಿ ಹೊಸ ವರ್ಷದ ಆಚರಣೆ ದಿನ ಸ್ಕೂಟಿಯಲ್ಲಿ ಹೋಗುತ್ತಿದ್ದ 20 ವರ್ಷದ ಯುವತಿಗೆ ಕಾರು ಡಿಕ್ಕಿಯಾಗಿದ್ದು, ಸುಮಾರು 12 ಕಿ.ಮೀ ಎಳೆದೊಯ್ಯಲಾಗಿತ್ತು. ಈ ಘಟನೆ ನಂತರ ಅಂಜಲಿ ಸಿಂಗ್ ಅವರು ನಗ್ನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅದಾದ ಕೆಲವೇ ಗಂಟೆಗಳಲ್ಲಿ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.










