ಡ್ರಗ್ಸ್ ಪ್ರಕರಣ : ರಕುಲ್ ಪ್ರೀತ್ ಸಿಂಗ್, ರಾಣಾ ದಗ್ಗುಬಾಟಿ, ರವಿ ತೇಜಗೆ ಇಡಿ ಸಮನ್ಸ್…

84
firstsuddi

ನವದೆಹಲಿ : ನಾಲ್ಕು ವರ್ಷಗಳ ಹಿಂದೆ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ಚಿತ್ರರಂಗದ ರಕುಲ್ ಪ್ರೀತ್ ಸಿಂಗ್, ರಾಣಾ ದಗ್ಗುಬಾಟಿ, ರವಿ ತೇಜ ಮತ್ತು ಚಾರ್ಮಿ ಕೌರ್ ಸೇರಿದಂತೆ 10 ಜನರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದೆ ಎಂದು ವರದಿಯಾಗಿದೆ.

ಸೆಪ್ಟೆಂಬರ್ 6ಕ್ಕೆ ರಕುಲ್ ಪ್ರೀತ್ ಸಿಂಗ್, ಸೆಪ್ಟೆಂಬರ್ 8ಕ್ಕೆ ರಾಣಾ ದಗ್ಗುಬಾಟಿ ಮತ್ತು ಸೆಪ್ಟೆಂಬರ್ 9ರಂದು ರವಿತೇಜ ಹೈದರಬಾದ್ ನಲ್ಲಿರುವ ಇಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಲಿದ್ದಾರೆ. ಟಾಲಿವುಡ್ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಅವರಿಗೆ ಆಗಸ್ಟ್ 31ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ. ಇವರೆಲ್ಲರು ಸೆಪ್ಟೆಂಬರ್ 2ರಿಂದ 22ರ ಒಳಗೆ ವಿಚಾರಣೆಗೆ ಹಾಜರಾಗಲು ಇಡಿ ಸೂಚಿಸಿದೆ.

2017ರಲ್ಲಿ ದೊಡ್ಡ ಮಾದಕ ವಸ್ತು ಜಾಲ ಪತ್ತೆ ಆಗಿತ್ತು. ಅದರಲ್ಲಿ ಅಕ್ರಮ ಹಣ ವರ್ಗಾವಣೆ ಆಗಿರುವುದು ಕೂಡ ಕಂಡುಬಂದಿತ್ತು. ಅದಕ್ಕೆ ಸಂಬಂಧಿಸಿದಂತೆ 12 ಕೇಸ್ಗಳನ್ನು ದಾಖಲು ಮಾಡಿಕೊಳ್ಳಲಾಗಿತ್ತು. ಅಕ್ರಮ ಹಣ ವರ್ಗಾವಣೆಗೆ ಸಂಬಂಧಪಟ್ಟಂತೆ ಈಗ ಈ ಸೆಲೆಬ್ರಿಟಿಗಳನ್ನು ವಿಚಾರಣೆಗೆ ಕರೆಯಲಾಗಿದೆ. ‘ಇವರೆಲ್ಲರನ್ನು ಆರೋಪಿಗಳು ಎಂದು ಹೇಳಲಾಗಿಲ್ಲ. ಅಕ್ರಮ ಹಣ ವರ್ಗಾವಣೆಯಲ್ಲಿ ಈ ಸೆಲೆಬ್ರಿಟಿಗಳು ಭಾಗಿ ಆಗಿದ್ದಾರೋ ಇಲ್ಲವೋ ಎಂದು ಈಗಲೇ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ’ ಎಂದು ಮಾಧ್ಯಮವೊಂದಕ್ಕೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2017ರಲ್ಲಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ತೆಲಂಗಾಣದ ಅಬಕಾರಿ ಇಲಾಖೆ, 12 ಲಕ್ಷ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದುಕೊಂಡು ಒಟ್ಟು 12 ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿತ್ತು. ಇದೇ ಪ್ರಕರಣದಲ್ಲಿ ಟಾಲಿವುಡ್ ಕಲಾವಿದರ ಹೆಸರು ಕೇಳಿ ಬಂದರೂ, ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆ ಎಸ್ಐಟಿ ಯಾರನ್ನೂ ಆರೋಪಿಗಳೆಂದು ಪರಿಗಣಿಸಿರಲಿಲ್ಲ.