ಕಾನ್ಪುರ: 1991ರ ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಸಾಬೀತಾಗುತ್ತಿದ್ದಂತೆಯೇ ಉತ್ತರ ಪ್ರದೇಶದ ಸಚಿವ ರಾಕೇಶ್ ಸಚನ್ ಅವರು ಕೋರ್ಟ್ನಿಂದ ಪಲಾಯನ ಮಾಡಿದ್ದಾರೆ. ದಶಕಗಳಷ್ಟು ಹಳೆಯದಾದ ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣದಲ್ಲಿ ಶನಿವಾರ ಕಾನ್ಪುರ ನ್ಯಾಯಾಲಯವು ಸಚಿವ ರಾಕೇಶ್ ಸಚನ್ ಅವರನ್ನು ತಪ್ಪಿತಸ್ಥರೆಂದು ಘೋಷಿಸಿತು. ಇದಾದ ನಂತರ ಅವರು ಜಾಮೀನು ಬಾಂಡ್ ಗಳನ್ನು ಒದಗಿಸದೆ ನ್ಯಾಯಾಲಯದಿಂದ ನಾಪತ್ತೆಯಾಗಿದ್ದಾರೆ.
ಮಧ್ಯಮ, ಸಣ್ಣ ಮತ್ತು ಅತಿ ಸಣ್ಣ ಉದ್ಯಮಗಳು ಹಾಗೂ ಖಾದಿ ಇಲಾಖೆಗಳ ಸಚಿವರಾಗಿರುವ ರಾಕೇಶ್ ಸಚನ್ ಉತ್ತರ ಪ್ರದೇಶದ ಕಳೆದ ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿ ಸೇರ್ಪಡೆಯಾಗಿದ್ದರು.
ರಾಕೇಶ್ ಅವರನ್ನು ವಶಕ್ಕೆ ಪಡೆದುಕೊಳ್ಳುವ ಹಾಗೂ ಶಿಕ್ಷೆಯ ಮೇಲಿನ ವಾದಗಳು ಆರಂಭವಾಗುವುದಕ್ಕೂ ಮುನ್ನ ಅವರು ಕೋರ್ಟ್ನಿಂದ ಪರಾರಿಯಾಗಿದ್ದಾರೆ ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಸೇರಿದಂತೆ, ವಿರೋಧ ಪಕ್ಷಗಳು ಆರೋಪಿಸಿವೆ.
ಈ ಆರೋಪವನ್ನು ತಳ್ಳಿಹಾಕಿರುವ ಸಚಿವ, ಇದು ವದಂತಿ ಎಂದಿದ್ದಾರೆ. ಕೆಲವು ಪ್ರಕರಣಗಳು ಬಾಕಿ ಇವೆ. ಕೆಲವು ವಿಷಯಗಳನ್ನು ತಪ್ಪಾಗಿ ಬಿಂಬಿಸಲಾಗುತ್ತಿದೆ. ಕೋರ್ಟ್ ನಿರ್ಧಾರವನ್ನು ಒಪ್ಪಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಜಾಮೀನು ಪಡೆಯಲು ಸಚಿವರು ಇಂದು ನ್ಯಾಯಾಲಯಕ್ಕೆ ಹಾಜರಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.










