ತ್ರಿವರ್ಣ ಧ್ವಜ ಕೆಳಗಿಳಿಸಿ ಖಲಿಸ್ತಾನಿಗಳ ಉದ್ಧಟತನ ; ತಕ್ಕ ಉತ್ತರ ನೀಡಿದ ಭಾರತ…

55
firstsuddi

ಹೈದರಾಬಾದ್ : ಲಂಡನ್ ನಲ್ಲಿರುವ ಭಾರತೀಯ ಹೈಕಮಿಷನ್ ಕಟ್ಟಡದಿಂದ ತ್ರಿವರ್ಣ ಧ್ವಜವನ್ನು ಕೆಳಗಿಳಿಸಿದ ಖಲಿಸ್ತಾನ್ ಪರ ಪ್ರತಿಭಟನಾಕಾರರಿಗೆ ಭಾರತ ತಕ್ಕ ಉತ್ತರ ನೀಡಿದೆ.

ಲಂಡನ್ ನ ಆಲ್ಡ್ ವಿಚ್‍ನಲ್ಲಿರುವ ಇಂಡಿಯಾ ಹೌಸ್ ಮೇಲೆ ಭಾರತದ ಬೃಹತ್ ತ್ರಿವರ್ಣ ಧ್ವಜ ಹಾಕಲಾಗಿದೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಳಕೆದಾರರು ಭಾರತದ ಹೈಕಮಿಷನ್ ಅಧಿಕಾರಿಗಳ ನಡೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ರಾಷ್ರೀಯ ವಕ್ತಾರ ಜೈವೀರ್ ಶೆರ್ಗಿಲ್ ಫೋಟೋವನ್ನು ಟ್ವಿಟರ್ ನಲ್ಲಿ ಹಂಚಿಕೊಂಡು, ‘’ಝಂಡಾ ಊಂಚಾ ರಹೇ ಹಮಾರಾ’’ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಲಂಡನ್ ನಲ್ಲಿನ ಭಾರತೀಯ ಹೈಕಮಿಷನ್ ನಲ್ಲಿನ ತ್ರಿವರ್ಣ ಧ್ವಜಕ್ಕೆ ಅವಮಾನಿಸಲು ಯತ್ನಿಸಿದ ದುಷ್ಕರ್ಮಿಗಳ ವಿರುದ್ಧ ಬ್ರಿಟನ್ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಖಲಿಸ್ತಾನ್ ಪ್ರತ್ಯೇಕತಾವಾದಿ ಅಮೃತಪಾಲ್ ಸಿಂಗ್ ಬಂಧನಕ್ಕೆ ಪಂಜಾಬ್ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅಲ್ಲದೇ ಅಮೃತ್ ಪಾಲ್ ಆಪ್ತರನ್ನು ವಶಕ್ಕೆ ಪಡೆದಿದೆ. ಇದೇ ಹೊತ್ತಿನಲ್ಲಿ ಲಂಡನ್ ನಲ್ಲಿ ಖಲಿಸ್ತಾನ್ ಪ್ರತ್ಯೇಕತಾವಾದಿಗಳು ಭಾರತದ ಧ್ವಜವನ್ನು ಕೆಳಗಿಳಿಸಿ ಘೋಷಣೆ ಕೂಗಿದ್ದರು. ಅಲ್ಲದೇ ಖಲಿಸ್ತಾನ್ ಧ್ವಜವನ್ನು ಹಾರಿಸಿದ್ದರು. ಈ ದೃಶ್ಯದ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಹೈಕಮಿಷನ್ ಆವರಣಕ್ಕೆ ಪ್ರವೇಶಿಸಲು ಹೇಗೆ ಅನುಮತಿಸಲಾಯಿತು? ಈ ಸಂದರ್ಭದಲ್ಲಿ ಬ್ರಿಟಿಷ್ ಭದ್ರತೆಯ ಸಂಪೂರ್ಣ ಅನುಪಸ್ಥಿತಿ ಕುರಿತು ವಿವರಣೆ ನೀಡುವಂತೆ ಭಾರತ ಸರ್ಕಾರ ಕೇಳಿದೆ. ಯುಕೆಯಲ್ಲಿರುವ ಭಾರತೀಯ ರಾಜತಾಂತ್ರಿಕ ಆವರಣ ಮತ್ತು ಸಿಬ್ಬಂದಿ ಭದ್ರತೆ ವಿಚಾರದಲ್ಲಿ ಯುಕೆ ಸರ್ಕಾರದ ಉದಾಸೀನತೆ ತೋರಿರುವುದು ಸರಿಯಲ್ಲ ಎಂದು ಸರ್ಕಾರ ಬೇಸರ ವ್ಯಕ್ತಪಡಿಸಿದೆ.