ಚಿಕ್ಕಮಗಳೂರು: ಆದ್ಯ ವಚನಕಾರ ದೇವರ ದಾಸಿಮಯ್ಯನವರ ವಚನಗಳು ಸಾರ್ವಕಾಲಿಕ ಸತ್ಯಗಳು. ಅವು ಇಂದಿನ ರೋಗಗ್ರಸ್ತ ಸಮಾಜಕ್ಕೆ ದಿವ್ಯೌಷಧಗಳಾಗಿವೆ ಎಂದು ಜಯಬಸವ ತಪೋವನದ ಶ್ರೀ ಜಯಬಸವಾನಂದ ಸ್ವಾಮೀಜಿ ಹೇಳಿದರು.
ತಾಲೂಕಿನ ಉಂಡಾಡಿಹಳ್ಳಿಯ ಜಯಬಸವ ತಪೋವನ, ವಿಶ್ವಧರ್ಮ ಪೀಠದಲ್ಲಿ ಜಿಲ್ಲಾ ನೇಕಾರರ ಒಕ್ಕೂಟ ನಿನ್ನೆ ಏರ್ಪಡಿಸಿದ್ದ ಆದ್ಯ ವಚನಕಾರ ದೇವರ ದಾಸಿಮಯ್ಯನವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಭಕ್ತಿ ಭಂಡಾರಿ ಬಸವಣ್ಣನವರ ಅನುಭವ ಮಂಟಪದಲ್ಲಿದ್ದ ವಚನಕಾರರಲ್ಲಿ ಅತ್ಯಂತ ಹಿರಿಯ ವಚನಕಾರರು ದೇವರ ದಾಸಿಮಯ್ಯನವರು. ಹಾಗಾಗಿ ಅವರನ್ನು ಆದ್ಯ ವಚನಕಾರ ಎಂದು ಕರೆಯಲಾಯಿತು. ಅವರಿಗೆ ಅಲ್ಲಿ ವಿಶೇಷವಾದ ಸ್ಥಾನಮಾನ ಮತ್ತು ಗೌರವವಿತ್ತು ಎಂದು ತಿಳಿಸಿದರು.
ದೇವರ ದಾಸಿಮಯ್ಯನವರು, ಮಡಿವಾಳ ಮಾಚಯ್ಯನವರು ಮತ್ತು ಅಂಬಿಗರ ಚೌಡಯ್ಯನವರು ತಮ್ಮ ವಚನಗಳ ಮೂಲಕ ಲೋಕದ ಡೊಂಕನ್ನು ಎತ್ತಿ ತೋರಿದವರು, ಸಮಾಜವನ್ನು ತಿದ್ದಿದವರು ಎಂದರು.
ಅಂತಹ ಮಹಾತ್ಮರನ್ನು ಕೇವಲ ಜಾತಿಗೆ ಅಥವಾ ಸಮುದಾಯಕ್ಕೆ ಸೀಮಿತಗೊಳಿಸಬಾರದು, ದೇವರ ದಾಸಿಮಯ್ಯನವರಂತಹ ಮಹಾತ್ಮರನ್ನು ಎಲ್ಲರೂ ಪ್ರತಿದಿನ ಸ್ಮರಣೆ ಮಾಡಬೇಕು ಎಂದು ಕಿವಿ ಮಾತು ಹೇಳಿದರು.
ನಾರಾಯಣ್ ಅವರನ್ನು ನಿಗಮದ ಅಧ್ಯಕ್ಷರನ್ನಾಗಿ ಮಾಡುವಂತೆ ಒತ್ತಾಯ:
ದೇವಾಂಗ ಮತ್ತು ನೇಕಾರ ಸಮುದಾಯದ ಅಭಿವೃದ್ಧಿಗೆ ಎಲೆಮರೆ ಕಾಯಿಯಂತೆ ದುಡಿಯುತ್ತಿರುವ ನಗರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಹೆಚ್.ಎಂ.ನಾರಾಯಣ್ ಅವರನ್ನು ನೇಕಾರ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ಮಾಡುವಂತೆ ಸ್ವಾಮೀಜಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಸರಳ, ಸಜ್ಜನಿಕೆಗೆ ಹೆಸರಾಗಿರುವ, ಸದಾಜನಾಂಗದ ಅಭಿವೃದ್ಧಿಗೆ ತುಡಿಯುವ ನಾರಾಯಣ್ ಅವರನ್ನು ನಿಗಮದ ಅಧ್ಯಕ್ಷರನ್ನಾಗಿ ಮಾಡಿದರೆ ನೇಕಾರ ಸಮುದಾಯದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ದೇವಾಂಗ ಸಂಘದ ಪ್ರಧಾನಕಾರ್ಯ ದರ್ಶಿ ಹೆಚ್.ಎಮ್.ನಾರಾಯಣ್, ಜಯಬಸವಾನಂದ ಸ್ವಾಮೀಜಿಯವರ ಒತ್ತಾಸೆ ಮತ್ತು ಆಹ್ವಾನದ ಮೇರೆಗೆ ಈ ಬಾರಿ ದಾಸಿಮಯ್ಯನವರ ಜಯಂತಿಯನ್ನು ಜಯಬಸವ ತಪೋವನದಲ್ಲಿ ಏರ್ಪಡಿಸಲಾಗಿದ್ದು, ಇನ್ನು ಮುಂದೆ ಪ್ರತಿ ವರ್ಷ ಇಲ್ಲೇ ಆಚರಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ನೇಕಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸಿ.ಟಿ.ಶಿವರಾಮ್ ಸೇರಿದಂತೆ ಸಮಾರಂಭದಲ್ಲಿ ಮಾತನಾಡಿದ ಬಹುತೇಕ ಮುಖಂಡರು ಹೆಚ್.ಎಂ.ನಾರಾಯಣ್ ಅವರನ್ನು ನೇಕಾರ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ಮಾಡುವಂತೆ ಆಗ್ರಹಿಸಿದರು.
ದೇವರ ದಾಸಿಮಯ್ಯನವರ ಭಾವಚಿತ್ರಕ್ಕೆ ಸಾಮೂಹಿಕವಾಗಿ ಪುಷ್ಪ ನಮನ ಸಲ್ಲಿಸಲಾಯಿತು. ಜಯಂತಿ ಪ್ರಯುಕ್ತ ಭಕ್ತರಿಗೆ ಸಿಹಿ ವಿತರಿಸಲಾಯಿತು. ಶರಣೆ ನೀಲಮ್ಮನವರಿಂದ ದಾಸಿಮಯ್ಯನವರ ವಚನಗಳ ಗಾಯನ ನಡೆಯಿತು.
ಜಿಲ್ಲಾ ದೇವಾಂಗ ಸಂಘದ ಖಜಾಂಚಿ ಟಿ.ಎನ್.ಶಿವರುದ್ರಪ್ಪ, ನಿರ್ದೇಶಕ ಮಂಜು, ಸಹಕಾರ್ಯದರ್ಶಿ ಬಿ.ಎಂ.ಕುಮಾರ್,ಡಾ.ರಾಜಕುಮಾರ್ ಅಭಿಮಾನಿ ಸಂಘದ ಮಾಜಿ ಅಧ್ಯಕ್ಷ ಎಲ್.ವಿ.ಕೃಷ್ಣಮೂರ್ತಿಕೋಟೆ ವಿಶ್ವನಾಥ್ ಉಪಸ್ಥಿತರಿದ್ದರು.










