ದುಷ್ಕರ್ಮಿಗಳ ಗುಂಡಿನ ದಾಳಿಗೆ ಉದ್ಯಮಿ ಸೇರಿದಂತೆ ಇಬ್ಬರ ಸಾವು…

44
firstsuddi

ಪಟ್ನಾ: ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಿಂದಾಗಿ ಉದ್ಯಮಿ ಹಾಗೂ ಆತನ ಅಂಗರಕ್ಷಕ ಸಾವನ್ನಪ್ಪಿರುವ ಘಟನೆ ಬಿಹಾರದ ಮುಜಾಫರ್‌ಪುರದಲ್ಲಿ ನಡೆದಿದೆ.

ಮೃತ ಉದ್ಯಮಿಯನ್ನು ಅಶುತೋಷ್ ಶಾಹಿ ಎಂದು ಗುರುತಿಸಲಾಗಿದೆ. ಇವರು ಪ್ರಾಪರ್ಟಿ ಡೀಲರ್ ಉದ್ಯಮ ನಡೆಸುತ್ತಿದ್ದರು. ಗುಂಡಿನ ಚಕಮಕಿಯಲ್ಲಿ ಅವರ ಅಂಗರಕ್ಷಕ ಕೂಡ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಅವರ ಮತ್ತಿಬ್ಬರು ಅಂಗರಕ್ಷಕರು ಮತ್ತು ವಕೀಲ ಸೈಯದ್ ಖಾಸಿಂ ಹಸನ್ ಗಾಯಗೊಂಡಿದ್ದಾರೆ. ಅವರ ಸ್ಥಿತಿ ಕೂಡ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಬ್ಬರು ಆರೋಪಿಗಳು ಕೃತ್ಯದಲ್ಲಿ ಶಾಮೀಲಾಗಿರುವುದು ದೃಢಪಟ್ಟಿದೆ. ಆದರೆ ಗುಂಡಿನ ದಾಳಿಯಲ್ಲಿ ಒಟ್ಟು ನಾಲ್ವರು ಭಾಗಿಯಾಗಿದ್ದಾರೆ. ಎರಡು ಬೈಕ್‍ನಲ್ಲಿ ಬಂದಿದ್ದ ನಾಲ್ವರು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಆಸ್ತಿಯ ವಿಚಾರವಾಗಿ ಈ ಹತ್ಯೆ ನಡೆದಿದೆ ಎಂದು ತಿಳಿದು ಬಂದಿದೆ. ಆದರೆ ಇದು ದೃಢಪಟ್ಟಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.