ದೂರು ದಾಖಲಿಸಲು ತೆರಳಿದ್ದ ದಲಿತ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ಪೊಲೀಸ್ ಅಧಿಕಾರಿ…

58
firstsuddi

ಉತ್ತರ ಪ್ರದೇಶ: ದೂರು ದಾಖಲಿಸಲು ತೆರಳಿದ್ದ ದಲಿತ ಮಹಿಳೆಯ ಮೇಲೆ ಪೊಲೀಸ್ ಅಧಿಕಾರಿಯೊಬ್ಬರು ಅತ್ಯಾಚಾರವೆಸಗಿರುವ ಘಟನೆ ಇಲ್ಲಿನ ಪ್ರಯಾಗ್​ರಾಜ್​ನಲ್ಲಿ ನಡೆದಿದೆ.

ಹಿರಿಯ ಪೊಲೀಸ್ ಅಧಿಕಾರಿ ಸುಧೀರ್ ಕುಮಾರ್ ಮಾತನಾಡಿ, ಸಂತ್ರಸ್ತೆ ತನ್ನ ಸಾಕ್ಷ್ಯದಲ್ಲಿ ಝಂಘೈ ಪೊಲೀಸ್ ಹೊರಠಾಣೆ ಉಸ್ತುವಾರಿ ಸುಧೀರ್ ಕುಮಾರ್ ಪಾಂಡೆ ಸೆಪ್ಟೆಂಬರ್ 21ರಂದು ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿದ್ದಾರೆ. ಮಹಿಳೆಯ ದೂರಿನ ಆಧಾರದ ಮೇಲೆ ಸರಾಯಿ ಮಾಮ್ರೇಜ್ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿರುವ ಪಾಂಡೆ ವಿರುದ್ಧ ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಮತ್ತು 120 ಬಿ ಮತ್ತು ಎಸ್‌ಸಿ/ಎಸ್‌ಟಿ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಸದ್ಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪಾಂಡೆ ತಲೆಮರೆಸಿಕೊಂಡಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ಮಹಿಳೆಗೆ ಕೆಲವು ಪುರುಷರು ಕಿರುಕುಳ ನೀಡುತ್ತಿದ್ದಾರೆ ಮತ್ತು ಕೊಲೆ ಬೆದರಿಕೆಗಳನ್ನು ಹಾಕುತ್ತಿದ್ದಾರೆ ಎಂದು ದೂರು ನೀಡಲು ಮಹಿಳೆ ಪೊಲೀಸ್ ಠಾಣೆಗೆ ಹೋಗಿದ್ದಳು. ಸೆಪ್ಟೆಂಬರ್ 21ರಂದು ಸಂಜೆ ಸಬ್ ಇನ್ಸ್‌ಪೆಕ್ಟರ್ ಪಾಂಡೆ ಆಕೆಯನ್ನು ಪೊಲೀಸ್ ಔಟ್‌ಪೋಸ್ಟ್‌ಗೆ ಕರೆಸಿದ್ದರು. ಪುರುಷರನ್ನು ಬಂಧಿಸಲು ಹೋಗುವ ನೆಪದಲ್ಲಿ ಆಕೆಯನ್ನು ಕಾರಿನಲ್ಲಿ ಕರೆದೊಯ್ದು ಮತ್ತು ಬರುವ ಔಷಧಿ ಬೆರೆಸಿ ಪ್ರಜ್ಞೆ ತಪ್ಪಿಸಿ ಕಾರಿನಲ್ಲಿ ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ತನಿಖೆ ನಡೆಸುವಂತೆ ಪೊಲೀಸ್ ಕಮಿಷನರ್ ರಮಿತ್ ಶರ್ಮಾ ಅವರು, ಹಂಡಿಯಾ ಎಸಿಪಿ ಸುಧೀರ್ ಕುಮಾರ್ ಅವರಿಗೆ ಸೂಚಿಸಿದ್ದಾರೆ.