ನವದೆಹಲಿ : ದೆಹಲಿಯಲ್ಲಿ ಮತ್ತೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆ ಸರ್ಕಾರ ಶಾಲೆಗಳಿಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲು ಮುಂದಾಗಿದ್ದು, ಈ ಬಗ್ಗೆ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಮಾಹಿತಿ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಕೆಲವು ದಿನಗಳಿಂದ ನಾನು ಕೆಲವು ಶಾಲೆಗಳ ಬಗ್ಗೆ ವರದಿ ಪಡೆದುಕೊಂಡಿದ್ದೇನೆ. ಅಲ್ಲಿ ಪೋಷಕರು ತಮ್ಮ ಮಗುವಿಗೆ ಕೊರೊನಾ ಪಾಸಿಟಿವ್ ಬಂದ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ನಿಟ್ಟಿನಲ್ಲಿ ನಾಳೆ ಶಾಲೆಗಳಿಗೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಲಾಗುವುದು ಎಂದಿದ್ದಾರೆ.
ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಕೊಂಚ ಹೆಚ್ಚಾಗಿದೆ. ಆದರೆ, ಆಸ್ಪತ್ರೆಗೆ ದಾಖಲಾಗುವರರ ಸಂಖ್ಯೆ ಕಡಿಮೆ ಇದೆ. ಹೀಗಾಗಿ ಗಾಬರಿಪಡುವ ಅವಶ್ಯಕತೆ ಇಲ್ಲ. ಸ್ವಲ್ವ ಎಚ್ಚರ ವಹಿಸಿದರೆ ಸಾಕು. ಈಗಾಗಲೇ ನಾವು ಕೋವಿಡ್ ನೊಂದಿಗೆ ಜೀವಿಸುವುದನ್ನು ಕಲಿತಿದ್ದೇವೆ. ಜತೆಗೆ ಸರ್ಕಾರ ಕೂಡಾ ನಿರಂತರವಾಗಿ ಪರಿಸ್ಥಿತಿ ಮೇಲೂ ನಿಗಾ ವಹಿಸಿದೆ ಎಂದು ಹೇಳಿದ್ದಾರೆ.
ಸೋಂಕು ಸಂಪೂರ್ಣ ಇಳಿಕೆ ಕಂಡು ಬಂದ ಹಿನ್ನಲೆಯಲ್ಲಿ ದೆಹಲಿಯಲ್ಲಿ ಮಾಸ್ಕ್ ಕಡ್ಡಾಯ ಧಾರಣೆ ನಿಯಮವನ್ನು ಸಡಿಲಗೊಳಿಸಲಾಗಿತ್ತು. ಆದರೆ, ಇದೀಗ ದೆಹಲಿಯಲ್ಲಿ ಮತ್ತೆ ಸೋಂಕು ಪ್ರಕರಣದಲ್ಲಿ ಗಮನಾರ್ಹ ಏರಿಕೆ ಕಂಡು ಬಂದಿದೆ. ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್ ಸಂಖ್ಯೆಗಳ ಏರಿಕೆಯ ನಂತರ, ಸೋಂಕಿನ ಪ್ರಮಾಣವು 2.5 ಪ್ರತಿಶತವನ್ನು ಮೀರಿದೆ. ಕಳೆದೆರಡು ತಿಂಗಳಿಗೆ ಹೋಲಿಕೆ ಮಾಡಿದರೆ ಈ ದರ ಹೆಚ್ಚಿದೆ.










