ಹೈದರಾಬಾದ್ : ನಿರ್ದಿಷ್ಟ ಸಮುದಾಯದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ತೆಲಂಗಾಣದ ಗೋಶಾಮಹಲ್ ಕ್ಷೇತ್ರದ ಬಿಜೆಪಿ ಶಾಸಕ ರಾಜಾಸಿಂಗ್ ವಿರುದ್ಧ ಹೈದರಾಬಾದ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಉದ್ಯಮಿ ಮೊಹಮ್ಮದ್ ಅಲಿ ಎಂಬುವರು ನೀಡಿದ ದೂರಿನ ಮೇರೆಗೆ ಶಾಸಕರ ವಿರುದ್ಧ ಕಾಂಚನಭಾಗ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 295-ಎ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಇನ್ ಸ್ಪೆಕ್ಟರ್ ಪಿ.ಉಮಾ ಮಹೇಶ್ವರರಾವ್ ತಿಳಿಸಿದ್ದಾರೆ.
ರಾಜಾಸಿಂಗ್ ನೀಡಿರುವ ಹೇಳಿಕೆಯ ವೈರಲ್ ವಿಡಿಯೋ ನನ್ನ ಬಳಿ ಇದೆ. ಈ ವಿಡಿಯೋದಲ್ಲಿ ನಿರ್ದಿಷ್ಟ ಸಮುದಾಯದ ಜನರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಹೇಳಿಕೆಯನ್ನು ನೀಡಿದ್ದು, ಶಾಸಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಮೊಹಮ್ಮದ್ ಅಲಿ ಒತ್ತಾಯಿಸಿದ್ದಾರೆ.










