ಧ್ವಜಾರೋಹಣ ಮಾಡಿದ ಕೆಲವೇ ಗಂಟೆಗಳಲ್ಲಿ ಟಿಆರ್‌ಎಸ್ ನಾಯಕನ ಹತ್ಯೆ…

83
firstsuddi

ಹೈದರಾಬಾದ್ : ತೆಲಂಗಾಣ ರಾಷ್ಟ್ರೀಯ ಸಮಿತಿ ಮುಖಂಡ(ಟಿಆರ್‌ಎಸ್) ತಮ್ಮಿನೇನಿ ಕೃಷ್ಣಯ್ಯ ಅವರ ಮೇಲೆ ಖಮ್ಮಂ ಗ್ರಾಮಾಂತರ ಮಂಡಲದ ತೆಲ್ದಾರುಪಲ್ಲಿ ಗ್ರಾಮದಲ್ಲಿ ನಾಲ್ವರು ಅಪರಿಚಿತ ವ್ಯಕ್ತಿಗಳು ಹಲ್ಲೆ ನಡೆಸಿ ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಿನ್ನೆ ಬೆಳಗ್ಗೆ ಟಿಆರ್‌ಎಸ್ ನಾಯಕ ರಾಷ್ಟ್ರಧ್ವಜಾರೋಹಣ ಸಮಾರಂಭ ಮುಗಿಸಿ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ.

ಖಮ್ಮಂ ಜಿಲ್ಲೆಯ ಸಹಾಯಕ ಪೊಲೀಸ್ ಆಯುಕ್ತರ ಪ್ರಕಾರ, ತಮ್ಮಿನೇನಿ ಕೃಷ್ಣಯ್ಯ ಅವರು ರಾಷ್ಟ್ರಧ್ವಜಾರೋಹಣ ಮುಗಿಸಿ ಬೈಕ್ ನಲ್ಲಿ ಹಿಂತಿರುಗುತ್ತಿದ್ದರು. ತೆಲ್ದಾರುಪಲ್ಲಿ ಗ್ರಾಮದ ಪ್ರವೇಶ ದ್ವಾರದಲ್ಲಿ ಆಟೋ ರಿಕ್ಷಾದಲ್ಲಿ ಬಂದ ನಾಲ್ವರು ಅವರ ಮೇಲೆ ಹಲ್ಲೆ ನಡೆಸಿ ರಕ್ತಸಿಕ್ತ ದೇಹವನ್ನು ಬಿಟ್ಟು ಪರಾರಿಯಾಗಿದ್ದಾರೆ. ಘಟನೆಯಲ್ಲಿ ಭಾಗಿಯಾಗಿರುವ ನಾಲ್ವರು ಆರೋಪಿಗಳ ಪತ್ತೆಗೆ 4 ತಂಡಗಳನ್ನು ರಚಿಸಲಾಗಿದೆ. ತಮ್ಮಿನೇನಿ ಕೃಷ್ಣಯ್ಯ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ತಮ್ಮಿನೇನಿ ಕೃಷ್ಣಯ್ಯ ಅವರು ಕೆಲವು ದಿನಗಳ ಹಿಂದೆ ಸಿಪಿಎಂ ತೊರೆದು ತೆಲಂಗಾಣ ರಾಷ್ಟ್ರೀಯ ಸಮಿತಿ ಸೇರಿದ್ದರು. ಈ ಘಟನೆಯ ಸ್ವಲ್ಪ ಸಮಯದ ನಂತರ, ಸಿಪಿಐ(ಎಂ) ನಾಯಕ ತಮ್ಮಿನೇನಿ ಕೋಟೇಶ್ವರ ರಾವ್ ಅವರ ನಿವಾಸದ ಮುಂದೆ ಕಲ್ಲು ತೂರಾಟಕ್ಕೆ ಗುಂಪು ಜಮಾಯಿಸಿತು. ಜನಸಮೂಹವು ಸಿಪಿಐ(ಎಂ) ಮುಖಂಡನ ನಿವಾಸದ ಭಾಗಗಳಿಗೆ ತೀವ್ರ ಹಾನಿ ಮಾಡಿದೆ. ಕೂಡಲೇ ಗುಂಪನ್ನು ಚದುರಿಸಿದೆವು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ತೆಲ್ದಾರುಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಿಆರ್ ಪಿಸಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ.