ಬೆಂಗಳೂರು : ತೆಲುಗು ನಟ ನಂದಮೂರಿ ತಾರಕರತ್ನ ಅವರಿಗೆ ನಿನ್ನೆ ತೀವ್ರ ಹೃದಯಾಘಾತ ಸಂಭವಿಸಿತ್ತು. ಸದ್ಯ ಅವರನ್ನು ಆಂಧ್ರದ ಕುಪ್ಪಂನ ಪಿಇಎಸ್ ವೈದ್ಯಕೀಯ ಕಾಲೇಜಿನಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಹೊಸೂರು ರಸ್ತೆಯ ನಾರಾಯಣ ಹೃದಯಾಲಯಕ್ಕೆ ಸ್ಥಳಾಂತರ ಮಾಡಲಾಗಿದೆ.
ನಂದಮೂರಿ ತಾರಕರತ್ನ ಅವರನ್ನು ತಡರಾತ್ರಿ 12 ಗಂಟೆ ಸಂದರ್ಭದಲ್ಲಿ ಆಂಧ್ರದ ಕುಪ್ಪಂನಿಂದ ಆಂಬ್ಯುಲೆನ್ಸ್ ಮೂಲಕ ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ. ಬಳಿಕ ಯಶಸ್ವಿಯಾಗಿ ಆಂಜಿಯೋಗ್ರಾಮ್ ಮಾಡಿ ಸ್ಟಂಟ್ ಅಳವಡಿಕೆ ಮಾಡಲಾಗಿದ್ದು, ಸದ್ಯ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿರುವುದಾಗಿ ಆಸ್ಪತ್ರೆ ಮೂಲಗಳು ಮಾಹಿತಿ ನೀಡಿವೆ.
ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಪುತ್ರ ನರಾ ಲೋಕೇಶ್ ಅವರು ಕುಪ್ಪಂನಲ್ಲಿ ಪಾದಯಾತ್ರೆ ಆರಂಭಿಸಿದ್ದಾರೆ. ಈ ಪಾದಯಾತ್ರೆಯಲ್ಲಿ ಭಾಗಿಯಾದಾಗ ತಾರಕರತ್ನ ಅವರು ಅಸ್ವಸ್ಥರಾದರು. ತಕ್ಷಣ ಅವರನ್ನು ಕುಪ್ಪಂನ ಸಮೀಪದ ಆಸ್ಪತ್ರೆಗೆ ದಾಖಲಿಸಿ ನಂತರ ಪಿಇಎಸ್ ವೈದ್ಯಕೀಯ ಕಾಲೇಜಿಗೆ ರವಾನಿಸಲಾಯಿತು. ಪಿಇಎಸ್ ವೈದ್ಯಕೀಯ ಕಾಲೇಜು ವೈದ್ಯರ ಸಲಹೆಯಂತೆ ಉತ್ತಮ ಚಿಕಿತ್ಸೆಗಾಗಿ ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ.










