ನಟ ಉಪೇಂದ್ರಗೆ ರಿಲೀಫ್- ಎಫ್‌ಐಆರ್​ಗೆ ಹೈಕೋರ್ಟ್ ತಡೆ…

68
firstsuddi

ಸೋಶಿಯಲ್ ಮೀಡಿಯಾದಲ್ಲಿ ಜಾತಿ ನಿಂದನೆ ಪದ ಬಳಸಿದ ಆರೋಪವನ್ನು ಎದುರಿಸುತ್ತಿದ್ದ ನಟ ಉಪೇಂದ್ರ ಅವರಿಗೆ ರಿಲೀಫ್ ಸಿಕ್ಕಂತಾಗಿದೆ. ಉಪೇಂದ್ರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್​ಗೆ ತಡೆ ನೀಡಿ ಹೈಕೋರ್ಟ್ ಆದೇಶಿಸಿದೆ.

ಉಪೇಂದ್ರ ವಿರುದ್ಧ ಬೆಂಗಳೂರಿನ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತಮ್ಮ ವಿರುದ್ಧ ಹಾಕಲಾಗಿದ್ದ ಎಫ್‌ಐಆರ್​ಗೆ ತಡೆ ನೀಡಬೇಕು ಎಂದು ಕೋರಿ ಉಪೇಂದ್ರ ಅವರು ಹೈಕೋರ್ಟ್ ಮೆಟ್ಟಿಲು ಏರಿದ್ದರು. ಈಗ ಅವರ ಪರವಾಗಿ ಕೋರ್ಟ್ ಆದೇಶ ನೀಡಿದೆ.

ಉಪೇಂದ್ರ ಸಲ್ಲಿಸಿದ್ದ ಮನವಿಯನ್ನು ಏಕಸದಸ್ಯ ಪೀಠವು ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು. ಉಪೇಂದ್ರ ಪರ ವಕೀಲ ಉದಯ್ ಹೊಳ್ಳ ವಾದ ಮಂಡಿಸಿ, ‘ಆ ಪದವನ್ನು ದುರುದ್ದೇಶದಿಂದ ಬಳಸಿದ್ದಲ್ಲ, ಉಪೇಂದ್ರ ಅವರು ಜನಪ್ರಿಯ ವ್ಯಕ್ತಿಯ ಜೊತೆ ಜವಾಬ್ದಾರಿಯುತ ವ್ಯಕ್ತಿಯು ಆಗಿದ್ದಾರೆ. ಅವರಿಗೆ ಎಲ್ಲರ ಬಗ್ಗೆಯೂ ಗೌರವವಿದೆ ಎಂದು ಮನವರಿಕೆ ಮಾಡಿಕೊಟ್ಟರು. ಉಪೇಂದ್ರ ಪರ ವಕೀಲರ ವಾದ ಆಲಿಸಿದ ನ್ಯಾಯಮೂರ್ತಿಗಳು ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್​ಗೆ ಸಂಬಂಧಿಸಿದಂತೆ ಮಾತ್ರ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಇತ್ತೀಚೆಗೆ ಪ್ರಜಾಕೀಯದ ಬಗ್ಗೆ ಮಾತನಾಡಲು ಸೋಶಿಯಲ್ ಮೀಡಿಯಾದಲ್ಲಿ ಉಪೇಂದ್ರ ಅವರು ಲೈವ್ ಬಂದಿದ್ದರು. ಈ ವೇಳೆ ಅವರು ಬಳಸಿದ್ದ ಗಾದೆ ಮಾತಿನಿಂದ ಜಾತಿ ನಿಂದನೆ ಆಗಿದೆ ಎಂಬ ಆರೋಪ ಕೇಳಿಬಂತು. ಹಾಗಾಗಿ ಅವರ ವಿರುದ್ಧ ದೂರು ದಾಖಲಿಸಲಾಯಿತು. ಜನರಿಂದ ತೀವ್ರ ಆಕ್ಷೇಪ ಎದುರಾದ ಹಿನ್ನೆಲೆಯಲ್ಲಿ ಉಪೇಂದ್ರ ಅವರು ಕ್ಷಮೆ ಕೇಳಿದ್ದರು ಮತ್ತು ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದರು.

ಜಾತಿ ನಿಂದನೆ ಆರೋಪ ಎದುರಾದ ಬಳಿಕ ಉಪೇಂದ್ರ ಅವರ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಕಿಡಿಕಾರಲು ಆರಂಭಿಸಿದರು. ಈಗ ಉಪೇಂದ್ರ ಅವರ ಮನೆಗೆ ಪೊಲೀಸರು ಬಿಗಿ ಭದ್ರತೆ ನೀಡಿದ್ದಾರೆ. ಬೆಂಗಳೂರಿನ ಕತ್ತರಿಗುಪ್ಪೆ ಮತ್ತು ಸದಾಶಿವ ನಗರದ ತಮ್ಮ ನಿವಾಸದಲ್ಲಿ ಉಪೇಂದ್ರ ಇಲ್ಲ ಎಂದು ಹೇಳಲಾಗುತ್ತಿದೆ. ಆದರೂ ಮುಂಜಾಗೃತ ಕ್ರಮವಾಗಿ ಪೊಲೀಸರು ಭದ್ರತೆ ಒದಗಿಸಿದ್ದಾರೆ.

ಬೆಂಗಳೂರಿನಲ್ಲಿ ಮೂರು ದೂರು ಹಾಗೂ ಕೋಲಾರದಲ್ಲಿ ಒಂದು ದೂರು ದಾಖಲಾದ ಬೆನ್ನಲ್ಲೇ ಮಂಡ್ಯದಲ್ಲೂ ಉಪೇಂದ್ರ ವಿರುದ್ದ ದೂರು ಸಲ್ಲಿಕೆಯಾಗಿದೆ.