ನಟ, ಐಎಎಸ್ ಅಧಿಕಾರಿ ಕೆ.ಶಿವರಾಮ್ ವಿಧಿವಶ…

74
firstsuddi

ಖ್ಯಾತ ನಟ, ಮಾಜಿ ಐಎಎಸ್ ಅಧಿಕಾರಿ, ರಾಜಕಾರಣಿ ಕೆ. ಶಿವರಾಮ್ ಅವರು ಇಂದು ವಿಧಿವಶರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಚಿತ್ರರಂಗದ ಗಣ್ಯರು ಹಾಗು ರಾಜಕಾರಣಿಗಳು ಕೋರುತ್ತಿದ್ದಾರೆ. 

ಶಿವರಾಮ್ ಅವರಿಗೆ 15 ದಿನಗಳ ಹಿಂದೆ ಅಧಿಕ ರಕ್ತದೊತ್ತಡದಿಂದ ಸಮಸ್ಯೆ ಆಗಿತ್ತು. ಇತ್ತೀಚೆಗೆ ಹೃದಯಾಘಾತ ಆಯಿತು. ಹೀಗಾಗಿ, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಯಿತು. ಸಾವಿಗೂ ಮುನ್ನ ಅವರ ಮಿದುಳು ಕೂಡ ಕಾರ್ಯ ನಿರ್ವಹಿಸುವುದನ್ನು ನಿಲ್ಲಿಸಿಬಿಟ್ಟಿತ್ತು. ಅವರನ್ನು ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡಲಾಯಿತು. ಈಗ ಅವರು ಮೃತಪಟ್ಟಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

ಕೆ ಶಿವರಾಮ್ 1953ರ ಏಪ್ರಿಲ್ 6ರಂದು ರಾಮನಗರ ಜಿಲ್ಲೆಯ ಉರಗಳ್ಳಿಯಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ತಮ್ಮ ಹಳ್ಳಿಯಲ್ಲಿ ಮುಗಿಸಿದ ಇವರು, ಬೆಂಗಳೂರಿನ ಮಲ್ಲೇಶ್ವರಂ ಸರ್ಕಾರಿ ಶಾಲೆಯಲ್ಲಿ ಪ್ರೌಢಶಿಕ್ಷಣ ಪೂರ್ಣಗೊಳಿಸಿದರು. ವಿವಿ ಪುರಂನ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಡಿಗ್ರಿ ಮುಗಿದ ಶಿವರಾಮ್, ನಂತರ 1982ರಲ್ಲಿ ಮೈಸೂರು ಯುನಿವರ್ಸಿಟಿಯಿಂದ ಇತಿಹಾಸ ವಿಷಯದಲ್ಲಿ ಮಾಸ್ಟರ್ ಆಫ್ ಆಟ್ಸ್ ಪದವಿ ಪಡೆದರು. 1985ರಲ್ಲಿ ಕೆಎಎಸ್ ಪರೀಕ್ಷೆ ಬರೆದು ಉತ್ತೀರ್ಣರಾದರು. ನಂತರ ಕನ್ನಡ ಭಾಷೆಯಲ್ಲಿಯೇ ಐಎಎಸ್ ಪರೀಕ್ಷೆ ಬರೆದು ಉತ್ತೀರ್ಣರಾದ ಭಾರತದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 1986ರಿಂದ 2013ರವರೆಗೆ ಅವರು ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.

ಈ ಮಧ್ಯೆ ಶಿವರಾಮ್ ಅವರಿಗೆ ಸಿನಿಮಾಸಕ್ತಿಯೂ ಬೆಳೆದಿತ್ತು. 1993ರ ಸೂಪರ್ ಹಿಟ್ ಸಿನಿಮಾ ‘ಬಾ ನಲ್ಲೆ ಮಧುಚಂದ್ರಕೆ’ ಚಿತ್ರದಲ್ಲಿ ನಟಿಸಿ ಗೆಲುವು ಕಂಡರು. ನಂತರ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 2017ರಲ್ಲಿ ರಿಲೀಸ್ ಆದ ‘ಟೈಗರ್’ ಅವರ ನಟನೆಯ ಕೊನೆಯ ಸಿನಿಮಾ.

ರಾಜಕೀಯ ಬದುಕು:-
2013ರಲ್ಲಿ ಶಿವರಾಮ್ ಅವರು ಕಾಂಗ್ರೆಸ್ ಸೇರಿದರು. 2014ರಲ್ಲಿ ಜೆಡಿಎಸ್ ಸೇರಿದ ಅವರು, ಬಿಜಾಪುರ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದರು. ರಮೇಶ್ ಜಿಗಜಿಣಗಿ ವಿರುದ್ಧ ಸೋತರು. ಅದೇ ವರ್ಷ ಅವರು ಮರಳಿ ಕಾಂಗ್ರೆಸ್​ಗೆ ಬಂದರು. ಅದೇ ವರ್ಷ ಅಕ್ಟೋಬರ್ ತಿಂಗಳಲ್ಲಿ ಬಿಜೆಪಿ ಸೇರಿದರು. ಛಲವಾದಿ ಮಹಸಭಾದ ಅಧ್ಯಕ್ಷರಾಗಿದ್ದರು. ಕೆ ಶಿವರಾಮ್ ದಲಿತ ಪರ ಹೋರಾಟಕ್ಕೆ ಹೆಸರುವಾಸಿಯಾಗಿದ್ದಾರೆ.