ಬೆಂಗಳೂರು : ನಟ ಪುನೀತ್ ರಾಜ್‍ಕುಮಾರ್ ಬಗ್ಗೆ ವ್ಯಕ್ತಿಯೊಬ್ಬ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದ. ಈತನ ಕೃತ್ಯಕ್ಕೆ ತೀವ್ರ ಖಂಡನೆ ವ್ಯಕ್ತವಾದ ಬೆನ್ನಲ್ಲೇ ನಗರ ಸೈಬರ್ ಪೊಲೀಸರು ಪೋಸ್ಟ್ ಹಿಂದೆ ಬಿದ್ದಿದ್ದರು. ಇದೀಗ ಪೋಸ್ಟ್ ಮಾಡಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಅಪ್ಪು ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ನಗರದಲ್ಲಿ ಮದ್ಯ ಮಾರಾಟ ನಿಷೇಧ ಮಾಡಲಾಗಿತ್ತು. ಕುಡಿದ ಅಮಲಿನಲ್ಲಿ ಅಭಿಮಾನಿಗಳು ಭಾವೋದ್ವೇಗಕ್ಕೆ ಒಳಗಾಗಬಹುದು. ಅದನ್ನು ತಪ್ಪಿಸಲು ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಲಾಗಿತ್ತು. ಹೀಗಿದ್ದರೂ ಪುನೀತ್ ರಾಜ್ ಕುಮಾರ್ ಸಾವನ್ನಪ್ಪಿದ ದಿನ ವ್ಯಕ್ತಿಯೊಬ್ಬ ಮದ್ಯ ಖರೀದಿಸಿ ಮದ್ಯ ಬಾಟಲಿಯ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುವುದರ ಜೊತೆಗೆ, ರಾಜ್ ಕುಮಾರ್ ನಮ್ಮನ್ನು ತಡೆಯಲು ಸಾಧ್ಯವಿಲ್ಲ. ಆತನನ್ನು ನೆನಪಿಟ್ಟುಕೊಳ್ಳಿ. ಮರೆಯಬೇಡಿ. ಯಾಕೆಂದರೆ, ಇದನ್ನು ಕುಡಿದ ಬಳಿಕ ಅವನ ಸಮಾಧಿ ಮೇಲೆ ನಾವು ಮೂ** ಮಾಡುತ್ತೇವೆ ಎಂದು ಅಶ್ಲೀಲ ಪದಗಳನ್ನು ಬಳಸಿ ಪೋಸ್ಟ್ ಮಾಡಿದ್ದ.
ಈ ಪೋಸ್ಟ್ ವಿರುದ್ಧ ನಟ ಕಿಚ್ಚ ಸುದೀಪ್ ಪುತ್ರಿ ಸಾನ್ವಿ, ಕೇವಲ ಆಲ್ಕೋಹಾಲ್ ಗಾಗಿ ಪುನೀತ್ ಬಗ್ಗೆ ಇಂಥ ವರ್ತನೆಯೇ? ಜನರಲ್ಲಿ ಮನುಷ್ಯತ್ವ ಉಳಿದಿಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.










