ಮುಂಬೈ : ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್‌ಮುಖ್ ಅವರನ್ನು ಜಾರಿ ನಿರ್ದೇಶನಾಲಯ ತಡರಾತ್ರಿ ಮುಂಬೈನಲ್ಲಿ ಬಂಧಿಸಿದೆ.
12 ಗಂಟೆಗಳ ಸತತ ವಿಚಾರಣೆಯ ಬಳಿಕ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಬಂಧನ ಮಾಡಲಾಗಿದೆ. ಈ ಹಿಂದೆ ಐದು ಬಾರಿ ಸಮನ್ಸ್ ಜಾರಿಯಾಗಿದ್ದರೂ ಅವರು ವಿಚಾರಣೆಗೆ ಗೈರು ಹಾಜರಾಗಿದ್ದರು. ಸಮನ್ಸ್ ರದ್ದುಪಡಿಸುವಂತೆ ಕೋರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ಶುಕ್ರವಾರ ತಿರಸ್ಕರಿಸಿತ್ತು.
71 ವರ್ಷದ ಅನಿಲ್ ದೇಶ್‌ಮುಖ್, ವಿಡಿಯೋ ಸಂದೇಶ ಬಿಡುಗಡೆ ಮಾಡಿದ್ದರು. ವೀಡಿಯೊ, ನನ್ನ ವಿರುದ್ಧದ ಎಲ್ಲಾ ಆರೋಪಗಳು ಸುಳ್ಳು ಎಂದು ಹೇಳಿದ್ದರು.
ಮುಂಬೈ ಮಾಜಿ ಪೊಲೀಸ್ ಕಮಿಷನರ್ ಪರಮ್ ಬೀರ್ ಸಿಂಗ್ ಅವರು, ಪೊಲೀಸ್ ಇಲಾಖೆಯಲ್ಲಿ 100 ಕೋಟಿ ರೂ. ಲಂಚ ವಸೂಲಿ, ಸುಲಿಗೆ ಮಾಡುವಂತೆ ದೇಶ್‌ಮುಖ್ ಅವರು ಒತ್ತಡ ಹೇರುತ್ತಿದ್ದರು ಎಂದು ಗಂಭೀರ ಆರೋಪ ಮಾಡಿದ್ದರು. ಈ ಸಂಬಂಧ ಸಾಕ್ಷ್ಯಗಳನ್ನು ಕೂಡ ಬಿಡುಗಡೆ ಮಾಡಿದ್ದರು. ಈ ಆರೋಪದ ಹಿನ್ನೆಲೆಯಲ್ಲಿ ಇಡಿ ದೇಶ್‌ಮುಖ್ ವಿರುದ್ಧ ಪ್ರಕರಣ ದಾಖಲಿಸಿತ್ತು.










