ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಕೊಲೆ ಬೆದರಿಕೆ ಹಾಕಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಇ-ಮೇಲ್ ಮೂಲಕ ಬೆದರಿಕೆ ಕಳುಹಿಸಿದ್ದ ರಾಜಸ್ಥಾನದ ಜೋಧ್ ಪುರದ 21 ವರ್ಷದ ಯುವಕನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಧಾಕಡ್ ರಾಮ್ ವಿಷ್ಣೋಯ್ ಎಂದು ಗುರುತಿಸಲಾಗಿದೆ.
ಜೋಧ್ ಪುರ ಜಿಲ್ಲೆಯ ಲುನಿ ಗ್ರಾಮದಲ್ಲಿದ್ದ ಆರೋಪಿಯ ಇಂಟರ್ನೆಟ್ ಪ್ರೋಟೋಕಾಲ್ ವಿಳಾಸಗಳನ್ನು ಪತ್ತೆ ಮಾಡಿದ ನಂತರ ಮುಂಬೈ ಪೊಲೀಸರು ತಾಂತ್ರಿಕ ಸಹಾಯದ ಮೂಲಕ ಧಾಕಡ್ ನನ್ನು ಪತ್ತೆಹಚ್ಚಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪಂಜಾಬ್ ನ ಗಾಯಕ ಸಿದು ಮೂಸೆವಾಲಾ ಅವರ ತಂದೆಗೆ ಜೋಧ್ ಪುರ ಮೂಲದ ಆರೋಪಿ ಧಾಕಡ್ ರಾಮ್ ವಿಷ್ಣೋಯ್ ಇತ್ತೀಚೆಗೆ ಬೆದರಿಕೆ ಹಾಕಿದ್ದ. ಆರೋಪಿಯನ್ನು ಬಂಧಿಸಲು ಪಂಜಾಬ್ ನ ಮಾನ್ಸಾ ಜಿಲ್ಲೆಯ ಸದರ್ ಪೊಲೀಸ್ ಠಾಣೆಯ ತಂಡವು ಶುಕ್ರವಾರ ಜೋಧ್ ಪುರಕ್ಕೆ ಬಂದಿತ್ತು.
ಲೂನಿಯ ಎಸ್ಎಚ್ಒ ಈಶ್ವರ್ ಚಂದ್ರ ಪರೀಕ್ ತಂಡವು ಆರೋಪಿ ಧಾಕಡ್ ರಾಮ್ ವಿಷ್ಣೋಯ್ ನನ್ನು ಬಂಧಿಸಿ ಮುಂಬೈ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಆರೋಪಿಯನ್ನು ಈ ಹಿಂದೆಯೂ ಶಸ್ತ್ರಾಸ್ತ್ರ ಕಾಯ್ದೆಯಡಿ ಬಂಧಿಸಲಾಗಿತ್ತು.










