ಮುಂಬೈ(ಮಹಾರಾಷ್ಟ್ರ): ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಬೆಳಕಿಗೆ ಬಂದ ಡ್ರಗ್ಸ್ ಪ್ರಕರಣದ ತನಿಖೆ ನಡೆಸಿರುವ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‍ಸಿಬಿ) ಇಂದು ಮುಂಬೈನ ವಿಶೇಷ ಕೋರ್ಟ್ ಗೆ ಚಾರ್ಜ್ಶೀಟ್ ಸಲ್ಲಿಸಿದೆ.
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಜೂನ್ 14, 2020 ರಂದು ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಸುಶಾಂತ್ ಸಾವಿನ ನಂತರ ಡ್ರಗ್ಸ್-ಸಂಬಂಧಿತ ಪ್ರಕರಣ ಬೆಳಕಿಗೆ ಬಂದಿತು. ಎನ್‍ಸಿಬಿ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡು ತನಿಖೆ ನಡೆಸುತ್ತಿದೆ. ಈ ಪ್ರಕರಣದಲ್ಲಿ ರಿಯಾ ಚಕ್ರವರ್ತಿ ಅವರನ್ನು ಸೆಪ್ಟೆಂಬರ್ 2020 ರಲ್ಲಿ ಬಂಧಿಸಲಾಗಿತ್ತು. ಒಂದು ತಿಂಗಳ ನಂತರ ಬಾಂಬೆ ಹೈಕೋರ್ಟ್ ನಿಂದ ಜಾಮೀನು ನೀಡಲಾಯಿತು. ರಿಯಾ ಅಲ್ಲದೆ, ಆಕೆಯ ಸಹೋದರ ಶೋವಿಕ್ ಚಕ್ರವರ್ತಿ ಮತ್ತು ಇನ್ನೂ ಹಲವರು ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ, ಅವರಲ್ಲಿ ಹೆಚ್ಚಿನವರು ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾರೆ. ಇದೀಗ ಎನ್ ಸಿಬಿ ಪ್ರಕರಣದ 35 ಆರೋಪಿಗಳ ವಿರುದ್ಧ ವಿಶೇಷ ಎನ್ ಡಿಪಿಎಸ್ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದೆ.
ಚಾರ್ಜ್ ಶೀಟ್ ನಲ್ಲಿ, ಸುಶಾಂತ್ ಸಿಂಗ್ ರಜಪೂತ್ ಗೆಳತಿ ರಿಯಾ ಚಕ್ರವರ್ತಿ ತನ್ನ ಸಹೋದರ ಶೋವಿಕ್ ಸೇರಿದಂತೆ ಇತರ ಆರೋಪಿಗಳಿಂದ ಹಲವಾರು ಬಾರಿ ಗಾಂಜಾ ಖರೀದಿಸಿ ಅದನ್ನು ನಟ ಸುಶಾಂತ್ ಸಿಂಗ್ ಗೆ ನೀಡಿದ್ದಾಳೆ ಎಂದು ಎನ್ ಸಿಬಿ ಉಲ್ಲೇಖಿಸಿದೆ. ರಿಯಾ ಚಕ್ರವರ್ತಿ, ಶೋವಿಕ್ ಸೇರಿದಂತೆ 35 ಆರೋಪಿಗಳ ವಿರುದ್ಧ 38 ಆರೋಪಗಳನ್ನು ಎನ್ ಸಿಬಿ ಹೊರಿಸಿದ್ದು, ಎಲ್ಲಾ ಆರೋಪಿಗಳು ಮಾರ್ಚ್ 2020 ರಿಂದ ಡಿಸೆಂಬರ್ 2020 ರವರೆಗೆ ಪರಸ್ಪರ ಸಂಚು ರೂಪಿಸಿ ಮಾದಕ ವಸ್ತುಗಳನ್ನು ಅಕ್ರಮವಾಗಿ ಸಂಗ್ರಹಿಸಿದ್ದಾರೆ. ಕಳ್ಳಸಾಗಣೆ ಮೂಲಕ ಮಾರಾಟ ಮಾಡಿದ್ದಾರೆ. ಅಲ್ಲದೇ ಹಲವು ಬಾಲಿವುಡ್ ನಟರಿಗೆ ಮತ್ತು ಮುಂಬೈನ ಹೈ ಪ್ರೊಪೈಲ್ ಜನರಿಗೆ ಇವರು ಡ್ರಗ್ ಮಾರಾಟ ಮಾಡಿದ್ದಾರೆ ಎಂದು ಎನ್ ಸಿಬಿ ತಿಳಿಸಿದೆ.
ಎಲ್ಲಾ ಆರೋಪಿಗಳ ವಿರುದ್ಧ ಎನ್ ಡಿಪಿಎಸ್ ಕಾಯ್ದೆಯ ಸೆಕ್ಷನ್ 27 ಮತ್ತು 27 ಎ, 28 ಮತ್ತು 29 ರ ಅಡಿಯಲ್ಲಿ ಆರೋಪ ಹೊರಿಸಲಾಗಿದೆ. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಜುಲೈ 27ಕ್ಕೆ ನಿಗದಿಪಡಿಸಲಾಗಿದೆ.










