ಬೆಂಗಳೂರು : ನನಗೆ ವಿಚ್ಛೇದನ ನೀಡದೇ ಪ್ರಿಯಾಮಣಿಯನ್ನು ಮದುವೆ ಆಗಿದ್ದಾರೆಂದು ಮುಸ್ತಫಾ ರಾಜ್ ಮೊದಲ ಪತ್ನಿ ಆಯೇಷಾ ಗಂಭೀರ ಆರೋಪ ಮಾಡಿದ್ದು, ನಟಿ ಪ್ರಿಯಾಮಣಿ ಮತ್ತು ಮುಸ್ತಾಫಾ ರಾಜ್ ಮದುವೆ ಅಸಿಂಧು ಎಂದು ಹೇಳಿದ್ದಾರೆ.
2013ರಲ್ಲಿ ಮುಸ್ತಾಫಾ ಮತ್ತು ಆಯೇಷಾ ದೂರವಾಗಿದ್ದರು. ದಂಪತಿಗೆ ಎರಡು ಮಕ್ಕಳಿದ್ದಾರೆ. ಮೊದಲ ಪತ್ನಿಯಿಂದ ದೂರವಾದ ಬಳಿಕ 2017ರಲ್ಲಿ ಪ್ರಿಯಾಮಣಿಯನ್ನ ಮುಸ್ತಾಫಾ ಮದುವೆಯಾಗಿದ್ದರು. ಆದರೆ ಇದೀಗ ಮುಸ್ತಫಾ ವಿರುದ್ದ ಆರೋಪ ಮಾಡಿರುವ ಆಯೇಷಾ ನಾನಿನ್ನೂ ಮುಸ್ತಾಫಾ ರಾಜ್ ಪತ್ನಿಯಾಗಿದ್ದು, ಇಬ್ಬರೂ ವಿಚ್ಛೇದನಕ್ಕೆ ಅರ್ಜಿ ಸಹ ಸಲ್ಲಿಸಿಲ್ಲ. 2017ರಲ್ಲಿ ಪ್ರಿಯಾಮಣಿ ಅವರನ್ನ ಮದುವೆಯಾಗುವಾಗ ಮುಸ್ತಾಫಾ ನ್ಯಾಯಾಲಯಕ್ಕೆ ತಾವು ಬ್ಯಾಚೂಲರ್ ಅಂತ ಹೇಳಿಕೊಂಡಿದ್ದಾರೆ. ಹಾಗಾಗಿ ಇಬ್ಬರ ಮದುವೆ ಕಾನೂನಿನ ಪ್ರಕಾರ ಅಸಿಂಧು ಎಂದು ಹೇಳಿದ್ದಾರೆ.
ಆದರೆ ಆಯೇಷಾ ಆರೋಪಗಳನ್ನು ತಳ್ಳಿಹಾಕಿರುವ ಮುಸ್ತಾಫಾ ರಾಜ್, ನನ್ನ ವಿರುದ್ಧ ಸುಕಾಸುಮ್ಮನೇ ಆರೋಪಿಸಲಾಗುತ್ತಿದೆ. ನಾನು ಮಕ್ಕಳಿಗಾಗಿ ಪತ್ನಿಗೆ ಹಣ ನೀಡುತ್ತಿದ್ದೇನೆ. ಇದು ನನ್ನಿಂದ ಹೆಚ್ಚು ಹಣ ಪಡೆಯುವುದಕ್ಕಾಗಿ ಮಾಡುತ್ತಿರುವ ಹುನ್ನಾರ ಎಂದು ಮರು ಆರೋಪ ಮಾಡಿರುವ ಮುಸ್ತಫಾ, ಆಯೇಷಾ ಅವರು ಆರೋಪಿಸಿರುವಂತೆ ಕೌಟುಂಬಿಕ ದೌರ್ಜನ್ಯ ನಡೆದಿರುವುದೇ ಆದರೆ ಇಷ್ಟು ಸಮಯ ಏನೂ ಮಾಡುತ್ತಿದ್ದರು? ಎಂದು ಪ್ರಶ್ನೆ ಮಾಡಿದ್ದಾರೆ.










