ನಮ್ಮ ಮುಂದೆ ಯಾರೇ ನಿಂತರೂ ಗೆಲ್ಲೋದು ನಾವೇ: ನಟ ವಿಜಯ್ ಗೆ ಡಿಸಿಎಂ ಉದಯನಿಧಿ ಸವಾಲು.

36

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಎಲ್ಲೇ ವಿರೋಧ ಬಂದರೂ ತಮ್ಮ ಪಕ್ಷವೇ ಗೆಲ್ಲಲಿದೆ ಎಂದು ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಪರೋಕ್ಷವಾಗಿ ನಟ ಕಮ್ ರಾಜಕಾರಣಿ ವಿಜಯ್ ಎಚ್ಚರಿಕೆ ನೀಡಿದ್ದಾರೆ.
ಜನಪ್ರಿಯ ನಟ ವಿಜಯ್ ಅವರು ಅಕ್ಟೋಬರ್ 27ರಂದು ನೂತನವಾಗಿ ಪ್ರಾರಂಭಿಸಲಾದ ತನ್ನ ಪಕ್ಷ ತಮಿಳಗ ವೆಟ್ರಿ ಕಳಗಂ ಉದ್ಘಾಟನಾ ಸಮಾವೇಶವನ್ನು ನಡೆಸಿದರು. ವಿಲ್ಲುಪುರಂ ಜಿಲ್ಲೆಯ ವಿಕ್ರವಾಂಡಿಯಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ವಿಜಯ್ ಅವರು ತಮ್ಮ ಮೊದಲ ರಾಜಕೀಯ ಭಾಷಣವನ್ನು ಮಾಡಿದರು. ಅವರು ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ ಮತ್ತು ಬಿಜೆಪಿಯ ಹೆಸರೇಳದೆ ವಾಗ್ದಾಳಿ ನಡೆಸಿದ್ದರು. ಅಂದಿನಿಂದ, ತಮಿಳುನಾಡಿನ ನಾಯಕರು, ವಿಶೇಷವಾಗಿ ಡಿಎಂಕೆ ನಾಯಕರು ವಿಜಯ್ ಅವರ ಭಾಷಣ ಮತ್ತು ಹೇಳಿಕೆಗಳಿಗೆ ಪ್ರತಿಕ್ರಿಯಿಸುತ್ತಿದ್ದಾರೆ. ವಿಲ್ಲುಪುರಂನಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಉದಯನಿಧಿ, ವಿಜಯ್ ಮತ್ತು ಅವರ ರಾಜಕೀಯ ಬಗ್ಗೆ ಮಾತನಾಡಿದ್ದಾರೆ. 2026 ರ ವಿಧಾನಸಭಾ ಚುನಾವಣೆಯಲ್ಲಿ ನಮ್ಮನ್ನು ವಿರೋಧಿಸಲು ಯಾರು ನಿರ್ಧರಿಸಿದರೂ, ಅವರು ಯಾವುದೇ ಮೈತ್ರಿ ಮಾಡಿಕೊಂಡರೂ, ಅವರು ಯಾವುದೇ ದಿಕ್ಕಿನಿಂದ ಬಂದರೂ ಪರವಾಗಿಲ್ಲ, ಅದು ದೆಹಲಿ ಅಥವಾ ಸ್ಥಳೀಯವಾಗಿ ಯಾರೇ ಬರಲಿ ಗೆಲ್ಲುವುದು ಮಾತ್ರ ಡಿಎಂಕೆ ಎಂದು ಹೇಳಿದರು.