ಉಡುಪಿ : ನಾನು ಅಂಗಾಂಗ ದಾನಕ್ಕೆ ಸಹಿ ಹಾಕುತ್ತಿದ್ದೇನೆ. ನೀವು ಸಹಿ ಹಾಕಿ ಈ ಮೂಲಕ ಇನ್ನೊಬ್ಬರ ಜೀವ ಉಳಿಸುವ ಪವಿತ್ರ ಕಾರ್ಯಕ್ಕೆ ಮುಂದಾಗುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.
ಉಡುಪಿಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂದು ವಿಶ್ವ ಅಂಗಾಂಗ ದಾನ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಇತ್ತೀಚೆಗೆ ಅಂಗಾಂಗ ಕಸಿ ಮಾಡುವ ತಂತ್ರಜ್ಞಾನ ಬಂದಿದೆ ಇದರಿಂದ ಬಹಳಷ್ಟು ಜೀವಗಳನ್ನು ಉಳಿಸಬಹುದು. ಇಂತಹ ಸಂದರ್ಭದಲ್ಲಿ ಹೆಚ್ಚಿನ ಜನ ಅಂಗಾಂಗ ದಾನಕ್ಕೆ ಮುಂದೆ ಬಂದರೆ ಸಾವಿರಾರು ಜೀವಗಳನ್ನು ಉಳಿಸಲು ಸಾಧ್ಯವಿದೆ. ನಾನೂ ಕೂಡ ಅಂಗಾಂಗ ದಾನಕ್ಕೆ ಸ್ವತಃ ಸಹಿ ಹಾಕುವುದರೊಂದಿಗೆ ಎಲ್ಲರಿಗೂ ಕೂಡ ಕರೆ ನೀಡುತ್ತಿದ್ದೇನೆ. ಈ ಮೂಲಕ ಮಣ್ಣಲ್ಲಿ ಮಣ್ಣಾಗುವ ಬದಲು ಇನ್ನೊಂದು ಜೀವ ಉಳಿಸಲು ಸಹಕಾರಿಯಾಗೋಣ. ಆದ್ದರಿಂದ ವಿಶ್ವ ಅಂಗಾಂಗ ದಿನದಂದು ಎಲ್ಲರೂ ಅಂಗಾಂಗ ದಾನ ಮಾಡಲು ಸಂಕಲ್ಪ ಮಾಡೋಣ ಎಂದರು.










