ನಾಪತ್ತೆಯಾಗಿದ್ದ 9 ವರ್ಷದ ಬಾಲಕಿ ಶವ ಕೈಕಾಲುಗಳು ಕಟ್ಟಿದ್ದ ಸ್ಥಿತಿಯಲ್ಲಿ ಮೋರಿಯಲ್ಲಿ ಪತ್ತೆ…

50
firstsuddi

ಪುದುಚೇರಿ: ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದ 9 ವರ್ಷದ ಬಾಲಕಿ ಮೋರಿಯಲ್ಲಿ ಕೈಕಾಲುಗಳು ಕಟ್ಟಿದ್ದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ಪುದುಚೇರಿಯ ಮುಥಿಯಲ್‌ಪೇಟೆಯಲ್ಲಿ ನಡೆದಿದೆ.

ಕಳೆದ ಶನಿವಾರ ಬಾಲಕಿ ನಾಪತ್ತೆಯಾಗಿದ್ದಳು, ನಂತರ ಆಕೆಯ ಪೋಷಕರು ಎಲ್ಲಾ ಕಡೆ ಹುಡುಕಿ ವಿಫಲರಾಗಿದ್ದಾರೆ. ಬಳಿಕ ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದು, ಬಾಲಕಿಯ ಪತ್ತೆಗೆ ತಂಡ ರಚಿಸಲಾಗಿತ್ತು.

ಆದರೆ, ನಾಲ್ಕು ದಿನಗಳ ಬಳಿಕ ಬಾಲಕಿಯ ಕೊಳೆತ ಶವ ಆಕೆಯ ನಿವಾಸದ ಬಳಿಯ ಚರಂಡಿಯಲ್ಲಿ ಕೈಕಾಲು ಕಟ್ಟಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೃತದೇಹವನ್ನು ಹೊರತೆಗೆದ ಸ್ಥಳೀಯರು, ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ರಸ್ತೆ ತಡೆ ನಡೆಸಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ ಕುರಿತು ಪ್ರಶ್ನೆ ಮಾಡಿ ಪ್ರತಿಭಟನೆ ನಡೆಸಿದರು.

ಅಪರಿಚಿತ ಗುಂಪೊಂದು ಆಕೆಯನ್ನು ಅಪಹರಿಸಿ ಬಳಿಕ ಕೊಲೆ ಮಾಡಿದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಬಾಲಕಿಯನ್ನು ಗುಂಪು ಅತ್ಯಾಚಾರವೆಸಗಿ ಬಳಿಕ ಹತ್ಯೆ ಮಾಡಿರಬಹುದೇ ಎಂಬ ವಿಚಾರವನ್ನು ಪೊಲೀಸರು ಖಚಿತಪಡಿಸಿಲ್ಲವಾದರೂ ನಿರಾಕರಿಸಿಯೂ ಇಲ್ಲ. ಆಕೆಯ ಶವ ಪತ್ತೆಯಾಗುವುದಕ್ಕೂ ಮೊದಲು ಪೊಲೀಸರು ಅಪ್ರಾಪ್ತ ಹುಡುಗರು ಸೇರಿದಂತೆ ಆರು ಜನರ ವಿಚಾರಣೆ ನಡೆಸಿದ್ದರು.

ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.