ಮೂಡಿಗೆರೆ : ನಾಪತ್ತೆಯಾಗಿದ್ದ ಬೆಂಗಳೂರಿನ ಗೋವಿಂದರಾಜು ತಾಲೂಕಿನ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟ್‍ನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಬೆಂಗಳೂರಿನ ಮತ್ತಿಕೆರೆ ನಿವಾಸಿಯಾಗಿದ್ದ ಗೋವಿಂದರಾಜು ವೃತ್ತಿಯಲ್ಲಿ ಪೇಂಟರ್ ಆಗಿದ್ದ. ಈತ ಖಾಸಗಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ ಯುವತಿಯ ಹಿಂದೆ ಬಿದ್ದಿದ್ದನಂತೆ. ಆಕೆಗೆ ಗೋವಿಂದರಾಜು ಮೆಸೇಜ್ ಮಾಡುತ್ತಿದ್ದಾನಂತೆ. ಇನ್ನು ಈತನ ಮೆಸೇಜ್ ಕಹಾನಿ ತಿಳಿದ ಯುವತಿಯ ಮಾವ ಅನಿಲ್ ಸೋಮವಾರ ಮಾತನಾಡುವ ನೆಪದಲ್ಲಿ ಆತನನ್ನು ಕರೆದಿದ್ದಾನೆ. ಬಳಿಕ ಅನಿಲ್, ಭರತ್ ಸೇರಿದಂತೆ ಮತ್ತಿಬ್ಬರು ಆರೋಪಿಗಳು ಗೋವಿಂದರಾಜನನ್ನು ಮತ್ತಿಕೆರೆಯಿಂದ ಅಪಹರಿಸಿ ರಾಜ್ ಗೋಪಾಲ್ ನಗರದ ಅಂದರಳ್ಳಿಯಲ್ಲಿ ಕೊಲೆ ಮಾಡಿ ಮೃತದೇಹವನ್ನು ತಾಲೂಕಿನ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟ್‍ನ ಸಾವಿರಾರು ಅಡಿ ಆಳದ ಪ್ರಪಾತದಲ್ಲಿ ಎಸೆದಿದ್ದರು.
ಪೋಷಕರು ಗೋವಿಂದರಾಜು ಕಾಣೆಯಾಗಿರುವ ಬಗ್ಗೆ ಯಶವಂತಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ವಿಚಾರಣೆ ಆರಂಭಿಸಿದಾಗ ಕುಟುಂಬದವರಿಗೆ ಅನಿಲ್ ಮೇಲೆ ಅನುಮಾನವಿದ್ದರಿಂದ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಈ ವೇಳೆ ಭರತ್ ಮತ್ತಿತರ ಇಬ್ಬರು ಆರೋಪಿಗಳು ತಪ್ಪನ್ನು ಒಪ್ಪಿಕೊಂಡಿದ್ದು, ಇಂದು ಆರೋಪಿಗಳನ್ನು ಚಾರ್ಮಾಡಿ ಘಾಟಿಗೆ ಕರೆ ತಂದು ಯಶವಂತಪುರ ಠಾಣೆಯ ಸಬ್ ಇನ್ಸ್ ಪೆಕ್ಟರ್ ಮಹೇಶ್ ಅವರ ತಂಡ ಮೃತದೇಹವನ್ನು ಮೇಲೆತ್ತಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಬೆಂಗಳೂರಿನ ಯಶವಂತಪುರ ಪೊಲೀಸರ ಜೊತೆ ಕೊಟ್ಟಿಗೆಹಾರದ ಫಿಶ್ ಮೋಣು ಹಾಗೂ ಸ್ನೇಕ್ ಆರೀಫ್ ಮೃತದೇಹವನ್ನು ಮೇಲೆತ್ತಲು ಪೊಲೀಸರಿಗೆ ಸಹಕಾರ ನೀಡಿದ್ದಾರೆ.










