ನಿರ್ಭಯಾ ಪ್ರಕರಣ-ಆರೋಪಿ ಮುಖೇಶ್ ಸಲ್ಲಿಸಿದ್ದ ಕ್ಷಮಾದಾನ ಅರ್ಜಿ ತಿರಸ್ಕರಿಸಿದ ದೆಹಲಿ ಸರ್ಕಾರ…

242
firstsuddi

ನವದೆಹಲಿ : ನಿರ್ಭಯಾ ಅತ್ಯಾಚಾರ ಪ್ರಕರಣದ ಆರೋಪಿ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ದೆಹಲಿ ಸರ್ಕಾರ ತಿರಸ್ಕರಿಸಿದೆ. ಜ.7 ರಂದು ದೆಹಲಿ ಪಟಿಯಾಲ ಕೋರ್ಟ್ ಆರೋಪಿಗಳಿಗೆ ಗಲ್ಲುಶಿಕ್ಷೆಯ ವಿಧಿಸುವಂತೆ ಆದೇಶಿಸಿತ್ತು. ಬಳಿಕ ಕೋರ್ಟ್ ಆದೇಶವನ್ನು ಪ್ರಶ್ನಿಸಿ ಆರೋಪಿಗಳಾದ ಮುಖೇಶ್ ಹಾಗೂ ವಿನಯ್ ಶರ್ಮಾ ಅವರು ಸುಪ್ರೀಂಕೋರ್ಟ್ಗೆ ಕ್ಯುರೇಟಿವ್ ಅರ್ಜಿಯನ್ನು ಸಲ್ಲಿಸಿದ್ದರು. ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ ಜ.14ರಂದು ಅರ್ಜಿಯನ್ನು ವಜಾಗೊಳಿಸಿತ್ತು. ಅರ್ಜಿ ವಜಾಗೊಳ್ಳುತ್ತಿದ್ದಂತೆ ಆರೋಪಿ ಮುಖೇಶ್ ದೆಹಲಿ ಸರ್ಕಾರಕ್ಕೆ ಕ್ಷಮಾದಾನ ಅರ್ಜಿಯನ್ನು ಸಲ್ಲಿಸಿದ್ದರು. ಇದೀಗ ಆರೋಪಿ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ದೆಹಲಿ ಸರ್ಕಾರ ತಿರಸ್ಕರಿಸಿದ್ದು, ಬಳಿಕ ಅರ್ಜಿಯನ್ನು ವಜಾಗೊಳಿಸುವಂತೆ ಶಿಫಾರಸ್ಸು ಮಾಡಿ ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರಿಗೆ ಕಳುಹಿಸಿಕೊಟ್ಟಿತ್ತು. ದೆಹಲಿ ಸರ್ಕಾರದ ಶಿಫಾರಸ್ಸನ್ನು ಪರಿಗಣಿಸಿದ ಲೆ.ಗವರ್ನರ್ ಕೇಂದ್ರ ಗೃಹ ಸಚಿವಾಲಯಕ್ಕೆ ಅರ್ಜಿಯನ್ನು ಕಳುಹಿಸಿಕೊಟ್ಟಿದ್ದು, ಈ ಕುರಿತು ಕೇಂದ್ರ ಗೃಹ ಇಲಾಖೆ ಪರಿಶೀಲನೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿದು ಬಂದಿದೆ.