ನೂಪುರ್ ಶರ್ಮಾ ಬಗ್ಗೆ ಸುಪ್ರೀಂಕೋರ್ಟ್ ಅಭಿಪ್ರಾಯ ಖಂಡಿಸಿ ನಿವೃತ್ತ ನ್ಯಾಯಾಧೀಶರ ಬಹಿರಂಗ ಪತ್ರ.

57
firstsuddi

ನವದೆಹಲಿ : ನೂಪುರ್ ಶರ್ಮಾ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನ್ಯಾಯಾಧೀಶರು ನೀಡಿದ ಹೇಳಿಕೆಗಳನ್ನು ಖಂಡಿಸಿ ಬಹಿರಂಗ ಪತ್ರ ಬರೆಯಲಾಗಿದೆ. ಪ್ರವಾದಿ ಮಹಮದ್ ಕುರಿತು ಹೇಳಿಕೆ ನೀಡಿದ ನೂಪುರ್ ಶರ್ಮಾ ಬಗ್ಗೆ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಹಾಗೂ ಜೆ.ಬಿ.ಪರ್ದಿವಾಲಾ ಅವರಿದ್ದ ದ್ವಿಸದಸ್ಯ ಪೀಠವು ವಿಚಾರಣೆ ಬಳಿಕ ವ್ಯಕ್ತಪಡಿಸಿದ ಅಭಿಪ್ರಾಯವನ್ನು ಟೀಕಿಸಿ 15 ನಿವೃತ್ತ ನ್ಯಾಯಾಧೀಶರು, 77 ಮಾಜಿ ಅಧಿಕಾರಿಗಳು ಮತ್ತು ಸಶಸ್ತ್ರ ಪಡೆಗಳ 25 ನಿವೃತ್ತ ಅಧಿಕಾರಿಗಳು ಸಿಜೆಐ ಎನ್.ವಿ. ಅವರಿಗೆ ಪತ್ರ ಬರೆದಿದ್ದಾರೆ.

ನೂಪುರ್ ಶರ್ಮಾ ವಿಚಾರವಾಗಿ ಇತ್ತೀಚೆಗೆ ಸುಪ್ರೀಂ ಕೋರ್ಟ್ ನಡೆದುಕೊಂಡ ರೀತಿ ಲಕ್ಷ್ಮಣ ರೇಖೆ ದಾಟಿದಂತೆ ಎಂದು ನಿವೃತ್ತ ಸುಪ್ರೀಂ ಕೋರ್ಟ್ ಜಡ್ಜ್ ಗಳು ಅಭಿಪ್ರಾಯಪಟ್ಟಿದ್ದಾರೆ. ನೂಪುರ್ ಅವರ ಪ್ರಕರಣವನ್ನು ಬೇರೆಯದೇ ಮಾನದಂಡಗಳ ಪ್ರಕಾರ ವಿಚಾರಣೆ ನಡೆಸುತ್ತಿರುವುದು ಯಾಕೆಂಬುದು ಅರ್ಥವಾಗುತ್ತಿಲ್ಲ. ಸುಪ್ರೀಂಕೋರ್ಟ್ ನ ಈ ಕ್ರಮಕ್ಕೆ ಯಾವುದೇ ಮೆಚ್ಚುಗೆ ವ್ಯಕ್ತಪಡಿಸಲಾಗದು ಹಾಗೂ ನೆಲದ ಸರ್ವೋಚ್ಚ ನ್ಯಾಯಾಲಯದ ಪಾವಿತ್ರ್ಯಕ್ಕೆ ಈ ಕ್ರಮವು ಧಕ್ಕೆ ತರುವಂತಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಬಾಂಬೆ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ನ್ಯಾಯಮೂರ್ತಿ ಕ್ಷಿತಿಜ್ ವ್ಯಾಸ್, ಗುಜರಾತ್ ಹೈಕೋರ್ಟ್ ಮಾಜಿ ನ್ಯಾಯಾಧೀಶ ಎಸ್ ಎಂ ಸೋನಿ, ರಾಜಸ್ಥಾನ ಹೈಕೋರ್ಟ್ ಮಾಜಿ ನ್ಯಾಯಾಧೀಶರಾದ ಆರ್ ಎಸ್ ರಾಥೋಡ್ ಮತ್ತು ಪ್ರಶಾಂತ್ ಅಗರ್ವಾಲ್ ಮತ್ತು ದೆಹಲಿ ಹೈಕೋರ್ಟ್ ಮಾಜಿ ನ್ಯಾಯಾಧೀಶ ಎಸ್ ಎನ್ ಧಿಂಗ್ರಾ, ಮಾಜಿ ಐಎಎಸ್ ಅಧಿಕಾರಿಗಳಾದ ಆರ್ ಎಸ್ ಗೋಪಾಲನ್ ಮತ್ತು ಎಸ್ ಕೃಷ್ಣ ಕುಮಾರ್, ನಿವೃತ್ತ ರಾಯಭಾರಿ ನಿರಂಜನ್ ದೇಸಾಯಿ, ಮಾಜಿ ಡಿಜಿಪಿಗಳಾದ ಎಸ್ ಪಿ ವೈದ್ ಮತ್ತು ಬಿ ಎಲ್ ವೋಹ್ರಾ, ಲೆಫ್ಟಿನೆಂಟ್ ಜನರಲ್ ವಿ ಕೆ ಚತುರ್ವೇದಿ (ನಿವೃತ್ತ) ಮತ್ತು ಏರ್ ಮಾರ್ಷಲ್ ಎಸ್ ಪಿ ಸಿಂಗ್ (ನಿವೃತ್ತ) ಸಹ ಸುಪ್ರೀಂ ಕೋರ್ಟ್ ಅವಲೋಕನದ ಹೇಳಿಕೆಗೆ ಸಹಿ ಹಾಕಿದ್ದಾರೆ.

ಜುಲೈ 1 ರಂದು ಪ್ರವಾದಿ ಮೊಹಮ್ಮದ್ ವಿರುದ್ಧ ವಿವಾದಾತ್ಮಕ ಹೇಳಿಕೆ ಹಿನ್ನೆಲೆ ನೂಪುರ್ ಶರ್ಮಾ ಅವರನ್ನು ಸುಪ್ರೀಂಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. ದೇಶದಲ್ಲಿ ಈಗ ಏನಾಗುತ್ತಿದೆಯೋ ಅದೆಕ್ಕೆಲ್ಲಾ ಅವರೊಬ್ಬರೇ ಹೊಣೆ ಎಂದು ಹೇಳಿತ್ತು.