ಚಂಡಿಗಢ : ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ರಾಜೀನಾಮೆ ನೀಡಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿರುವ ಸಿಧು, ಮನುಷ್ಯನ ಸ್ವಭಾವದ ಕುಸಿತವು ರಾಜಿ ಮೂಲೆಯಿಂದ ಹುಟ್ಟಿಕೊಂಡಿದೆ. ಪಂಜಾಬ್ ನ ಭವಿಷ್ಯ ಮತ್ತು ಪಂಜಾಬ್ ನ ಕಲ್ಯಾಣಕ್ಕಾಗಿ ನಾನು ಎಂದಿಗೂ ರಾಜಿ ಮಾಡಿಕೊಳ್ಳಲಾರೆ. ಆದ್ದರಿಂದ ನಾನು ಈ ಮೂಲಕ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಆದರೆ ನಾನು ಕಾಂಗ್ರೆಸ್ ಪಕ್ಷದಲ್ಲಿದ್ದುಕೊಂಡು ಸೇವೆ ಮುಂದುವರೆಸುವುದಾಗಿ ತಿಳಿಸಿದ್ದಾರೆ.
ಸೆಪ್ಟೆಂಬರ್ 18 ರಂದು ಇದ್ದಕ್ಕಿದ್ದಂತೆ ಕ್ಯಾಪ್ಟನ್ ಅಮರೀಂದರ್ ಸಿಂಗ್ ಸಿಎಂ ಸ್ಥಾನದಿಂದ ಕೆಳಗಿಳಿದಿದ್ದರು. ಆ ಬಳಿಕ ಚರಣಜಿತ್ ಸಿಂಗ್ ಚನ್ನಿ ಅವರು ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಆದರೂ ಅಮರೀಂದರ್ ಸಿಂಗ್ ಹಾಗೂ ನವಜೋತ್ ಸಿಂಗ್ ಸಿಧು ನಡುವಿನ ಸಮರ ಮುಂದುವರೆದಿತ್ತು.
ರಾಜೀನಾಮೆ ಬಳಿಕ ಅಮರೀಂದರ್ ಸಿಂಗ್, ಮುಂಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ನವಜೋತ್ ಸಿಂಗ್ ಸಿಧು ಅವರನ್ನು ಗೆಲ್ಲಲು ಬಿಡುವುದಿಲ್ಲ.ದಕ್ಷ ಅಭ್ಯರ್ಥಿಯನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ನಿಲ್ಲಿಸುತ್ತೇವೆ. ಎಂದು ಬಹಿರಂಗ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಇದೀಗ ನವಜೋತ್ ಸಿಂಗ್ ಸಿಧು ರಾಜೀನಾಮೆ ನೀಡಿದ್ದಾರೆ.










