ಪತ್ನಿಗೆ ಸೀರೆ ಇಷ್ಟವಾಗಿಲ್ಲವೆಂದು ಅಂಗಡಿ ಮಾಲೀಕನ ಮೇಲೆ ಹಲ್ಲೆ ಮಾಡಿದ ಪತಿ…

54
firstsuddi

ಉತ್ತರ ಕನ್ನಡ: ಪತ್ನಿಗೆ ಸೀರೆ ಇಷ್ಟವಾಗದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಅಂಗಡಿ ಮಾಲೀಕನ ಮೇಲೆ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಶಿರಸಿ ನಗರದ ಸಿಪಿ ಬಜಾರದಲ್ಲಿ ನಡೆದಿದೆ.

ಶಿರಸಿಯ ಮೊಹಮ್ಮದ್ ಹಲ್ಲೆ ಮಾಡಿದ ವ್ಯಕ್ತಿ. ಬಲರಾಮ್ ಹಲ್ಲೆಗೊಳಗಾದ ಅಂಗಡಿ ಮಾಲೀಕ. ಶಿರಸಿಯ ಸಿಪಿ ಬಜಾರದಲ್ಲಿರುವ ಸಾಗರ ಬಟ್ಟೆ ಅಂಗಡಿಯಲ್ಲಿ ಮೊಹಮ್ಮದ್ ಪತ್ನಿಗೆಂದು ಸೀರೆ ತೆಗೆದುಕೊಂಡು ಹೋಗಿದ್ದನು. ಆದರೆ ಮೊಹಮ್ಮದ್ ತೆಗೆದುಕೊಂಡು ಹೋದ ಸೀರೆ ಆತನ ಪತ್ನಿಗೆ ಇಷ್ಟವಾಗಿಲ್ಲ. ಹೀಗಾಗಿ ಮೊಹಮ್ಮದ್ ಮತ್ತೆ ಸೀರೆ ಅಂಗಡಿಗೆ ಬಂದಿದ್ದಾನೆ.

ಇಲ್ಲಿ ಬೇರೆ ಸೀರೆ ಕೊಡಿ ಎಂದು ಹೇಳಿದ್ದಾನೆ. ಆಗ ಅಂಗಡಿಯಲ್ಲಿನ ಸಿಬ್ಬಂದಿ ಬೇರೆ ಬೇರೆ ಸೀರೆಗಳನ್ನು ತೋರಿಸಿದ್ದಾರೆ. ಆದರೆ ಮೊಹಮ್ಮದ್, ಸೀರೆಗಳು ಸರಿ ಇಲ್ಲ, ಬೇರೆ ಸೀರೆಗಳನ್ನು ತೋರಿಸಿ ಎಂದಿದ್ದಾನೆ. ಅದಕ್ಕೆ ಸಿಬ್ಬಂದಿ ನಮ್ಮಲ್ಲಿರುವುದು ಇಷ್ಟೆ ಸೀರೆ ಎಂದಿದ್ದಾರೆ. ಅದಕ್ಕೆಈ ಮೊಹಮ್ಮದ್ ಅವಾಚ್ಯ ಶಬ್ದಗಳಿಂದ ಬೈದು “ನೀನು ಒಳ್ಳೆ ಸೀರೆ ಇಡದೆ ಇದ್ದರೆ ಯಾಕೆ ಅಂಗಡಿ ಇಟ್ಟಿದ್ದೀಯಾ”? ಅಂತ ಬೈದಿದ್ದಾನೆ. ಅದಕ್ಕೆ ಸಿಬ್ಬಂದಿ ಬೈಯಬೇಡ, ನೀನು ಖರೀದಿಸಿದ ಸೀರೆಯ ಹಣ ಮರಳಿ ಕೊಡುತ್ತೇನೆ” ಎಂದು ಹೇಳಿದ್ದಾರೆ.

ಕೂಡಲೆ ಅಂಗಡಿಯಿಂದ ಹೊರಗೆ ಹೋದ ಮೊಹಮ್ಮದ್ ತನ್ನ ಗೆಳೆಯ ಸರ್ಪರಾಜ್ ಎಂಬುವನನ್ನು ಕರೆದುಕೊಂಡು ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹೊರ ಊರಿನಿಂದ ಬಂದು ನಮಗೆ ದಾದಾಗಿರಿ ಮಾಡುತ್ತಾರೆ. ಈ ದಿವಸ ಇವರಿಗೆ ಒಂದು ಗತಿ ತೋರಿಸಿಯೇ ಬಿಡುವಾ ಎಂದು ಹೇಳಿ ಅಂಗಡಿ ಮಾಲೀಕ ಹಾಗೂ ಕಾರ್ಮಿಕನ ಮೇಲೆ ಹಲ್ಲೆ ನಡೆಸಿದ್ದಾನೆ.

ಈ ಘಟನೆ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಘಟನೆ ಸಂಬಂಧ ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.