ಪವಿತ್ರಾಳ ಮನವಿಗೆ ಸ್ಪಂದಿಸಿ 5 ಲಕ್ಷ ಬೆಲೆಯ ಸೈಕಲ್ ನೀಡಿದ ಸಿಎಂ ಬೊಮ್ಮಾಯಿ.

89
firstsuddi

ಬೆಂಗಳೂರು : ಸೈಕ್ಲಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಂಡು ಬಹುಮಾನ ಗಳಿಸಿರುವ ಗದಗ್ ನ ಪವಿತ್ರಾ ಕುರ್ತಕೋಟಿಯ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 5 ಲಕ್ಷ ರೂ ಮೌಲ್ಯದ ಸೈಕಲ್ ಅನ್ನು ನೀಡಿದ್ದಾರೆ.

ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಕಡಕೋಳ ಗ್ರಾಮದ ಅಶೋಕ್ ಮತ್ತು ರೇಣುಕಾ ದಂಪತಿ ಮಗಳಾದ ಪವಿತ್ರಾ ಕುರ್ತಕೋಟಿ, 5 ನೇ ತರಗತಿಯಲ್ಲಿರುವಾಗ ಸೈಕ್ಲಿಂಗ್ ಕ್ರೀಡೆಯತ್ತಾ ಪ್ರವೇಶ ಪಡೆದು ಬಳಿಕ ಹಲವಾರು ರಾಜ್ಯ, ರಾಷ್ಟ್ರ ಮಟ್ಟದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಂಡು ಪ್ರಶಸ್ತಿ ಗಳಿಸಿದ್ದರು. ತಂದೆ ರೈತ ಕಾರ್ಮಿಕರಾಗಿದ್ದು, ತಾಯಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿ ಊಟದ ಅಡುಗೆ ಸಹಾಯಕರಾಗಿದ್ದಾರೆ. ಅತ್ಯಂತ ಬಡತನದಲ್ಲಿ ಜೀವನ ಸಾಗಿಸುತ್ತಿರುವ ಪವಿತ್ರ ಅವರಿಗೆ ಗುಣಮಟ್ಟದ ಸೈಕಲ್ ಖರೀದಿಸುವ ಶಕ್ತಿ ಇಲ್ಲ. ಈ ಮೊದಲು ದಾನಿಗಳ ಸಹಾಯದಿಂದ ಪವಿತ್ರ ಅವರು ಸೈಕಲ್ ಖರೀದಿಸಿ ವಿವಿಧ ಸ್ಪರ್ಧೆಯಲ್ಲಿ ಪಾಲ್ಗೊಂಡು ಬಹುಮಾನ ಗೆದ್ದಿದ್ದರು. ಪ್ರಸ್ತುತ ಪ್ರಥಮ ಪಿಯುಸಿ ವಿಡಿಎಫ್ಟಿ ಬಾಲಕಿಯರ ಕಾಲೇಜಿನಲ್ಲಿ ಓದುತ್ತಿದ್ದಾರೆ.

ಸಿಎಂ ಬೊಮ್ಮಾಯಿ ಅವರು ಖಾಸಗಿ ಸುದ್ದಿವಾಹಿನಿಯಲ್ಲಿ ಸಂದರ್ಶನದಲ್ಲಿದ್ದಾಗ ಒಳ್ಳೆಯ ಸೈಕಲ್ ತರಿಸಿಕೊಡುವಂತೆ ಪವಿತ್ರಾ ಮನವಿ ಮಾಡಿದ್ದಳು.ಈ ಮನವಿ ಹಿನ್ನೆಲೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ. ನಾರಾಯಣಗೌಡ ಹಾಗೂ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಬ್ಲಾಸಂ ಆಸ್ಪತ್ರೆ ಮತ್ತು ಮಧುಸೂದನ್ ಅವರ ಸಹಕಾರದೊಂದಿಗೆ Argon-18 E-119 ಸೈಕಲ್ ಅನ್ನು ಖರೀದಿಸಿ ಸಿಎಂ ಮೂಲಕ ಹಸ್ತಾಂತರಿಸಿದ್ದಾರೆ. ಕೆನಡಾದಿಂದ ತರಿಸಿರುವ ಈ ಸೈಕಲ್ ಬರೋಬ್ಬರಿ 5 ಲಕ್ಷ ಬೆಲೆಯದ್ದಾಗಿದೆ.

ಪವಿತ್ರಾ ಸೈಕ್ಲಿಂಗ್ ಸ್ಪರ್ಧೆಯ ಸಾಧನೆ
2018ರಲ್ಲಿ ಕುರುಕ್ಷೇತ್ರದಲ್ಲಿ ನಡೆದ ರೋಡ್ ಸೈಕ್ಲಿಂಗ್ 15 ಕಿ.ಮೀ ಸ್ಪರ್ಧೆಯಲ್ಲಿ 5ನೇ ಸ್ಥಾನ. 2019ರಲ್ಲಿ ಪುಣೆಯಲ್ಲಿ ನಡೆದ ರಾಷ್ಟ್ರಮಟ್ಟದ ಎಂ.ಟಿ.ಬಿ. ಸೈಕಲ್ ಸ್ಪರ್ಧೆಯಲ್ಲಿ 9ನೇ ಸ್ಥಾನ. 2021ರಲ್ಲಿ ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಎಂ.ಟಿ.ಬಿ. ಮೌಂಟೇನ್ ಬೈಕ್ ಸ್ಪರ್ಧೆಯಲ್ಲಿ 3ನೇ ಸ್ಥಾನ. 2021ರಲ್ಲಿ ಗದಗದಲ್ಲಿ ನಡೆದ ರಾಷ್ಟ್ರೀಯ ಎಂ.ಟಿ.ಬಿ. ಮೌಂಟೇನ್ ಬೈಕ್ ಸ್ಪರ್ಧೆಯಲ್ಲಿ 3ನೇ ಸ್ಥಾನ ಪಡೆದಿದ್ದಾರೆ. ಈಗ ನ್ಯಾಶನಲ್ ಲೆವೆಲ್ ಗೇಮ್ಸ್ ಚಾಂಪಿಯನ್ಶಿಪ್ ಪಂಜಾಬ್ ನ ಪಟಿಯಾಲದಲ್ಲಿ ನಡೆಯಲಿರುವ ಖೇಲೋ ಇಂಡಿಯಾ ಟೀಂಗೆ ಆಯ್ಕೆಯಾಗಿದ್ದಾರೆ.