ಪಿಎಸ್‍ಐ ಹಗರಣ : ಅಕ್ರಮ ಹೊರ ಬರುತ್ತಿದ್ದಂತೆ ಡ್ಯಾಂಗೆ ಮೊಬೈಲ್ ಬಿಸಾಡಿದ ಕಿಂಗ್​ಪಿನ್.

62
firstsuddi

ಕಲಬುರಗಿ : ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳಿಗೆ ಒಂದೊಂದೇ ಸ್ಫೋಟಕ ಮಾಹಿತಿಗಳು ಸಿಗುತ್ತಿವೆ. ಇಡೀ ಅಕ್ರಮದ ಪ್ರಮುಖ ಆರೋಪಿ ಎನ್ನಲಾದ ಮಂಜುನಾಥ್ ಮೇಳಕುಂದಿ, ಅಕ್ರಮ ಹೊರಗೆ ಬರುತ್ತಿದ್ದಂತೆ ತನ್ನಲ್ಲಿದ್ದ ಮೊಬೈಲ್ ಅನ್ನು ಡ್ಯಾಂಗೆ ಬಿಸಾಕಿದ್ದಾನೆ ಎಂಬ ಮಾಹಿತಿ ಹೊರಬಿದ್ದಿದ್ದು, ಇದೀಗ ಮೊಬೈಲ್ ಗಾಗಿ ಡ್ಯಾಂನಲ್ಲಿ ಸಿಐಡಿ ಅಧಿಕಾರಿಗಳು ಹುಡುಕಾಟ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.

ಈಗಾಗಲೇ ಬಂಧನಕ್ಕೊಳಗಾಗಿರುವ ನೀರಾವರಿ ಇಲಾಖೆ ಇಂಜಿನಿಯರ್ ಮಂಜುನಾಥ್ ಮೇಳಕುಂದಿ, ಅಕ್ರಮ ಹೊರಬರುತ್ತಿದ್ದಂತೆ ಸಾಕ್ಷಿ ನಾಶಪಡಿಸಲು ಮೇ 1 ರಂದು ತನ್ನ ಮೊಬೈಲ್ ನ್ನ ಆಳಂದ ತಾಲೂಕಿನ ಆಮರ್ಜಾ ಡ್ಯಾಂನಲ್ಲಿ ಬಿಸಾಕಿದ್ದಾರಂತೆ. ಸಿಐಡಿ ವಿಚಾರಣೆ ವೇಳೆ ಮೇಳಕುಂದಿ ಈ ವಿಷಯ ಬಾಯ್ಬಿಟ್ಟಿದ್ದು, ಇದೀಗ ಮೊಬೈಲ್ ಹುಡುಕಲು ಅಧಿಕಾರಿಗಳು ಮುಂದಾಗಿದ್ದಾರೆ. ಇಬ್ಬರು ನುರಿತ ಈಜು ತಜ್ಞರನ್ನ ಸಿಐಡಿ ಅಧಿಕಾರಿಗಳು ಕರೆದುಕೊಂಡು ಹೋಗಿ 35 ಅಡಿ ಆಳದ ಡ್ಯಾಂನಲ್ಲಿ ಮೊಬೈಲ್ ಹುಡುಕುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಒಟ್ಟಿನಲ್ಲಿ ಮೊಬೈಲ್ ಸಿಕ್ಕರೆ ಇಡೀ ಪ್ರಕರಣಕ್ಕೆ ಮತ್ತಷ್ಟು ರೋಚಕ ತಿರುವು ಸಿಗುವ ಸಾಧ್ಯತೆಯಿದೆ.

ಇನ್ನೂ ಇಡೀ ಅಕ್ರಮದ ಕೇಂದ್ರ ಸ್ಥಾನವಾಗಿರೋ ಜ್ಞಾನಜ್ಯೋತಿ ಶಾಲೆಯ ಕಾರ್ಯದರ್ಶಿ ದಿವ್ಯಾ ಹಾಗರಗಿ ಅವರ 11 ದಿನಗಳ ಸಿಐಡಿ ಕಸ್ಟಡಿ ನಿನ್ನೆಗೆ ಅಂತ್ಯವಾಗಿದೆ. ದಿವ್ಯಾಳನ್ನ ಸಿಐಡಿ ಅಧಿಕಾರಿಗಳು ನ್ಯಾಯಾಲಯದ ಮುಂದೆ ಹಾಜರುಪಡಿಸಿ, ನಂತರ ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ದಿದ್ದಾರೆ.