ಚಾಮರಾಜನಗರ : ಪುನೀತ್ ರಾಜ್ಕುಮಾರ್ ಅವರ ಆಸೆಯಂತೆ ರಾಜ್ ಕುಟುಂಬಸ್ಥರು ಆಡಿ ಬೆಳೆದ ಮನೆಯನ್ನು ಇದೀಗ ಮ್ಯೂಸಿಯಂನ್ನಾಗಿ ನಿರ್ಮಾಣ ಮಾಡಲು ರಾಜ್ ಕುಟುಂಬ ಮುಂದಾಗಿದೆ.
ಚಾಮರಾಜನಗರ ಗಡಿಯ ತಾಳವಾಡಿ ಸಮೀಪದ ಗಾಜನೂರಿನಲ್ಲಿ ಡಾ. ರಾಜ್ಕುಮಾರ್ ಅವರ ಮನೆ ಇದೆ. ಆ ಜಾಗಕ್ಕೆ ಪುನೀತ್ ರಾಜ್ಕುಮಾರ್ ಅವರು ಆಗಾಗ ಭೇಟಿ ನೀಡುತ್ತಿದ್ದರು. ಸದ್ಯ ಈ ಮನೆ ಕುಸಿಯುವ ಹಂತದಲ್ಲಿದೆ. ಈ ವರ್ಷ ಸುರಿದ ಭಾರಿ ಮಳೆಯಿಂದಾಗಿ ಈ ಮನೆಗೆ ಹಾನಿ ಆಗಿದೆ. ಕಳೆದ ಮೂರುವರೆ ತಿಂಗಳ ಹಿಂದೆ ಗಾಜನೂರಿನ ಹಳೆ ಮನೆಗೆ ಪುನೀತ್ ಭೇಟಿ ನೀಡಿದ್ದರು. ಗಾಜನೂರಿಗೆ ಮತ್ತೆ ಬಂದು ಅಪ್ಪಾಜಿಯವರ ಹಳೇ ಮನೆಯನ್ನು ದುರಸ್ತಿ ಮಾಡಿಸುವುದಾಗಿ ಪುನೀತ್ ರಾಜ್ಕುಮಾರ್ ಅವರು ಹೇಳಿದ್ದರು. ಆದರೆ ಆ ಕಾರ್ಯ ನೆರವೇರುವುದಕ್ಕೂ ಮುನ್ನವೇ ಅವರು ಇಹಲೋಕ ತ್ಯಜಿಸಿದರು. ಅಪ್ಪು ಅಂದುಕೊಂಡ ಕೆಲಸವನ್ನು ಈಗ ಅವರ ಕುಟುಂಬದವರು ಪೂರ್ಣಗೊಳಿಸಲು ತೀರ್ಮಾನಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಡಾ.ರಾಜ್ ಸಹೋದರಿ ನಾಗಮ್ಮ ಪುತ್ರ ಗೋಪಾಲ್ ಅವರು ರಾಜ್ಕುಮಾರ್, ಪುನೀತ್ ನೆನಪು ಶಾಶ್ವತವಾಗಿ ಉಳಿಸಲು ಮ್ಯೂಸಿಯಂ ಮಾಡಲು ನಿರ್ಧಾರ ಮಾಡಲಾಗಿದೆ. ಅಭಿಮಾನಿಗಳಿಗೆ ಮನೆ ವೀಕ್ಷಿಸಲು ಅವಕಾಶ ನೀಡಲಾಗುವುದು ಎಂದಿದ್ದಾರೆ.










