ಪೂಂಚ್: ಜಮ್ಮು ಮತ್ತು ಕಾಶ್ಮೀರದ ರಜೌರಿ ಸೆಕ್ಟರ್‌ನ ಪೂಂಚ್‍ನಲ್ಲಿ ಸೇನಾ ವಾಹನದ ಮೇಲೆ ದಾಳಿ ನಡೆಸಿ ಐವರು ಸೈನಿಕರ ಸಾವಿಗೆ ಕಾರಣವಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ನಿನ್ನೆ 12 ಜನ ಶಂಕಿತರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಾಳಿಯ ನಂತರ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಹಾಗೂ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮುಖೇಶ್ ಸಿಂಗ್ ಅವರು ತನಿಖೆಯ ಮೇಲ್ವಿಚಾರಣೆಗಾಗಿ ನೆರೆಯ ರಜೌರಿ ಜಿಲ್ಲೆಯಲ್ಲಿ ಮೊಕ್ಕಾಂ ಹೂಡಿದ್ದರು. ಇಬ್ಬರು ಅಧಿಕಾರಿಗಳು ಸಹ ಸ್ಥಳಕ್ಕೆ ಭೇಟಿ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.
ರಾಷ್ಟ್ರೀಯ ತನಿಖಾ ದಳದ (ಎನ್ಐಎ) ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ಶ್ರೇಣಿಯ ಅಧಿಕಾರಿಯ ನೇತೃತ್ವದ ತಂಡವೂ ಸ್ಥಳದಲ್ಲಿ ಪರಿಶೀಲನೆ ನಡೆಸಿದೆ. ಭಯೋತ್ಪಾದಕರನ್ನು ಪತ್ತೆ ಹಚ್ಚಲು ಡ್ರೋನ್‍ಗಳು ಮತ್ತು ಸ್ನಿಫರ್ ಡಾಗ್‍ಗಳನ್ನು ಬಳಸಲಾಗುತ್ತಿದೆ. ಸೇನೆ ಎಂಐ- ಚಾಪರ್‌ನೊಂದಿಗೆ ಪ್ರದೇಶದ ಪರಿಶೀಲನೆಯನ್ನು ಸಹ ನಡೆಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸುಮಾರು ಐವರು ಭಯೋತ್ಪಾದಕರು ದಾಳಿ ವೇಳೆ ಸ್ಥಳದಲ್ಲಿ ಇದ್ದಿರಬಹುದು ಮತ್ತು ಸೇನಾ ಟ್ರಕ್ ಮೇಲೆ ಮೂರು ಕಡೆಗಳಿಂದ ದಾಳಿ ನಡೆಸಿದ್ದಾರೆ. ಭಯೋತ್ಪಾದಕರು ಗ್ರೆನೇಡ್‍ಗಳು ಮತ್ತು ವಾಹನವನ್ನು ಸುಟ್ಟು ಹಾಕುವ ಜಿಗುಟಾದ ಬಾಂಬ್‍ಗಳನ್ನು ಬಳಸಿರಬಹುದು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ದಾಳಿಯ ನಂತರ ಅವರ ವಾಹನಕ್ಕೆ ಬೆಂಕಿ ಹೊತ್ತಿಕೊಂಡಿದ್ದರಿಂದ ಗುರುವಾರ ಐವರು ಸೇನಾ ಸಿಬ್ಬಂದಿ ಸಾವನ್ನಪ್ಪಿದರು. ಮತ್ತು ಇನ್ನೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ದಾಳಿಗೊಳಗಾದವರು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗೆ ನಿಯೋಜಿಸಲಾದ ರಾಷ್ಟ್ರೀಯ ರೈಫಲ್ಸ್ ಘಟಕದ ಯೋಧರಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.










