ಉಡುಪಿ: ಶ್ವಾಸಕೋಶ ತೊಂದರೆ, ನ್ಯುಮೋನಿಯಾ ಸಮಸ್ಯೆಯಿಂದ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿರುವ ಉಡುಪಿ ಪೇಜಾವರ ಶ್ರೀಗಳ ಆರೋಗ್ಯ ವಿಚಾರಿಸಲು ಅವರ ಶಿಷ್ಯೆ, ಬಿಜೆಪಿ ಹಿರಿಯ ನಾಯಕಿ ಉಮಾ ಭಾರತಿ ಸೋಮವಾರ ಆಸ್ಪತ್ರೆಗೆ ಭೇಟಿ ನೀಡಿದರು. ರೈಲಿನ ಮೂಲಕ ಉಡುಪಿಗೆ ಆಗಮಿಸಿದ ಅವರು ಮಣಿಪಾಲ ಆಸ್ಪತ್ರೆಗೆ ಝಡ್ಪ್ಲಸ್ ಭದ್ರತೆಯಲ್ಲಿ ಆಗಮಿಸಿ ಕಾರಿನಿಂದ ಇಳಿದು ವ್ಹೀಲ್ ಚೇರ್ ಮೂಲಕ ಆಸ್ಪತ್ರೆ ಒಳಗೆ ಸಾಗಿದರು. ಪೇಜಾವರ ವಿಶ್ವೇಶ ತೀರ್ಥ ಶ್ರೀಗಳಿಗೆ ಚಿಕಿತ್ಸೆ ನೀಡಲು ದೆಹಲಿ ಏಮ್ಸ್ ವೈದ್ಯರ ನೆರವು ಪಡೆಯಲಾಗಿದೆ ಎಂದು ಮಣಿಪಾಲ ಕೆಎಂಸಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಶ್ರೀಗಳ ಆರೋಗ್ಯಸ್ಥಿತಿ ಗಂಭೀರವಾಗಿಯೇ ಇದೆ. ಶ್ರೀಗಳ ದೇಹದ ರಕ್ತ ಸಂಚಾರ ಸಹಜವಾಗಿದೆ ಐಸಿಯುವಿನಲ್ಲಿಯೇ ಚಿಕಿತ್ಸೆ ಮುಂದುವರಿಸಲಾಗಿದೆ. ಭಾನುವಾರ ಬೆಂಗಳೂರಿನಿಂದ ತಜ್ಞ ವೈದ್ಯರ ತಂಡ ಇಲ್ಲಿಗೆ ಆಗಮಿಸಿದೆ ಎಂದು ಹೇಳಿದ್ದಾರೆ.










