ಫಡ್ನವಿಸ್ ಭೇಟಿಗಾಗಿ ಇಂದು ಮತ್ತೆ ಮುಂಬೈಗೆ ತೆರಳಲಿರುವ ರಮೇಶ್ ಜಾರಕಿಹೊಳಿ..!

97
firstsuddi

ಬೆಳಗಾವಿ : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಇಂದು ಮತ್ತೆ ಮುಂಬೈಗೆ ತೆರಳಲಿದ್ದಾರೆ. ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಭೇಟಿಗಾಗಿ ರಮೇಶ್ ಜಾರಕಿಹೊಳಿ ಇಂದು ಮುಂಬೈ ತೆರಳಲಿದ್ದು, ಭಾರೀ ಕುತೂಹಲ ಮೂಡಿಸಿದೆ.

ಸಂಜೆ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದ ಮೂಲಕ ಅವರು ಮುಂಬೈಗೆ ಕೆಲ ಆಪ್ತರ ಜೊತೆ ತೆರಳಲಿದ್ದಾರೆ ಎಂಬ ಮಾಹಿತಿ ದೊರಕಿದೆ. ನಾಳೆ ಬೆಳಗ್ಗೆ ದೇವೇಂದ್ರ ಫಡ್ನವಿಸ್ ಭೇಟಿ ಮಾಡಿ, ಮತ್ತೊಂದು ಸುತ್ತಿನ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ. ರಮೇಶ್ ಜಾರಕಿಹೊಳಿ ಬಿಜೆಪಿ ಸೇರ್ಪಡೆಯಲ್ಲಿ ದೇವೇಂದ್ರ ಫಡ್ನವಿಸ್ ಪ್ರಮುಖ ಪಾತ್ರ ವಹಿಸಿದ್ದರು. ಹೀಗಾಗಿ ಫಢ್ನವಿಸ್ ಅವರನ್ನು ರಮೇಶ ಜಾರಕಿಹೊಳಿ ರಾಜಕೀಯ ಗಾಡ್ ಫಾದರ್ ಎಂದು ನಂಬುತ್ತಾರೆ.

ತಮ್ಮ ಏಳಿಗೆ ಸಹಿಸದೇ ಷಡ್ಯಂತ್ರ ಮಾಡಿದ್ದಾರೆಂದು ಕೆಲ ಬಿಜೆಪಿ ಪ್ರಮುಖ ನಾಯಕರ ವಿರುದ್ಧ ಫಡ್ನವಿಸ್ ಅವರಿಗೆ ರಮೇಶ್ ಜಾರಕಿಹೊಳಿ ದೂರು ನೀಡಿದ್ದಾರೆ. ರಮೇಶ್ ದೂರನ್ನು ಫಡ್ನವಿಸ್ ಹೈಕಮಾಂಡ್ ನಾಯಕರ ಗಮನಕ್ಕೆ ತಂದಿದ್ದಾರೆ. ಹೀಗಾಗಿ, ಹೈಕಮಾಂಡ್ ಸಂದೇಶವನ್ನು ಫಡ್ನವಿಸ್ ನಾಳೆ ರಮೇಶ್ ಜಾರಕಿಹೊಳಿಗೆ ತಿಳಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದರ ಬಗ್ಗೆ ಮುಂಬೈನಲ್ಲಿ ನಿರ್ಧರಿಸುವುದಾಗಿ ರಮೇಶ್ ಜಾರಕಿಹೊಳಿ ಅವರು ಕೆಲ ದಿನಗಳ ಹಿಂದೆ ಹೇಳಿಕೆ ನೀಡಿದ್ದರು. ಹೀಗಾಗಿ, ರಮೇಶ್ ಜಾರಕಿಹೊಳಿ ಅವರ ಮುಂಬೈ ಭೇಟಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ನಾಳೆ ದೇವೇಂದ್ರ ಫಡ್ನವಿಸ್ ಅವರ ಭೇಟಿ ನಂತರ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವ ಸಾಧ್ಯತೆ ಇದೆ.