ಬಸ್, ಕಾರು ನಡುವೆ ಭೀಕರ ಅಪಘಾತ – 9 ಮಂದಿ ಸಾವು…

58
firstsuddi

ಅಹಮದಾಬಾದ್ : ಗುಜರಾತ್ ನ ನವಸಾರಿ ಜಿಲ್ಲೆಯಲ್ಲಿ ಇಂದು ಮುಂಜಾನೆ ಬಸ್ ಮತ್ತು ಕಾರು ನಡುವೆ ಭೀಕರ ಅಪಘಾತ ಸಂಭವಿಸಿದ್ದು, ದುರಂತದಲ್ಲಿ 9 ಜನರು ಸಾವನ್ನಪ್ಪಿದ್ದಾರೆ.

ಸೂರತ್ ನಿಂದ ಪ್ರಮುಖ್ ಸ್ವಾಮಿ ಮಹಾರಾಜ್ ಶತಾಬ್ದಿ ಮಹೋತ್ಸವ ಕಾರ್ಯಕ್ರಮ ಮುಗಿಸಿ ವಾಪಸ್ಸಾಗುತ್ತಿದ್ದ ಬಸ್ ನವಸಾರಿ ಜಿಲ್ಲೆಯ ವೆಸ್ಮಾ ಬಳಿಯ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಸಾಗುತ್ತಿದ್ದ ವೇಳೆ ಟೊಯೊಟಾ ಫಾರ್ಚುನರ್ ಕಾರಿಗೆ ಡಿಕ್ಕಿ ಹೊಡೆದಿದೆ. ಘಟನೆಗೂ ಮುನ್ನ ಚಾಲಕನಿಗೆ ಹೃದಯಾಘಾತವಾಗಿದ್ದು, ಇದರಿಂದ ವಾಹನದ ನಿಯಂತ್ರಣ ತಪ್ಪಿ ಭೀಕರ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಘಟನೆಯಲ್ಲಿ ಕಾರಿನಲ್ಲಿದ್ದ ಎಲ್ಲರೂ ಸಾವನ್ನಪ್ಪಿದ್ದು, ಬಸ್ ನಲ್ಲಿದ್ದ 28 ಜನರು ಗಾಯಗೊಂಡಿದ್ದಾರೆ. 11 ಜನ ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದರೆ, ಬಸ್ ನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.
ಅಪಘಾತದಿಂದ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗಿದ್ದು, ಬಳಿಕ ಪೊಲೀಸರು ಕ್ರೇನ್ ಬಳಸಿ ಬಸ್ ಅನ್ನು ರಸ್ತೆಯಿಂದ ತೆರವುಗೊಳಿಸಿದ್ದಾರೆ.